ಸರಕಾರಿ ಶಾಲೆಗೆ ಅಭಿನಂದನಾ ಗ್ರಂಥ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು

82

ಪ್ರಜಾಸ್ತ್ರ ಸುದ್ದಿ

ಆಲಮಟ್ಟಿ: ಇಲ್ಲಿನ ಸರಕಾರಿ  ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ‘ಕಲಿತ ಶಾಲೆ ಅಕ್ಷರ ತೋರಣ; ಎಂಬ ಅಭಿನಂದನ ಗ್ರಂಥ ಅರ್ಪಿಸಿರುವುದು ಇಡೀ ರಾಜ್ಯಕ್ಕೆ ಮಾದರಿ ಕೆಲಸವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದರು.

ಇಲ್ಲಿನ ಸಮುದಾಯ ಭವನದಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಪ್ರೇರಿತ ಎಂಪಿಎಸ್ ಮತ್ತು ಎಂಎಚ್‌ಎ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡ ‘ಕಲಿತ ಶಾಲೆಗೆ ಅಕ್ಷರ ತೋರಣ’ ಹಾಗೂ ಗುರು ಶಿಷ್ಯರ ಮಹಾಸಂಗಮ ಕಾರ್ಯಕ್ರಮದಲ್ಲಿ ಶುಕ್ರವಾರ  ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದೂ ಮರೆಯಬಾರದು. ಉತ್ತಮ ತಾಯಿ ನೂರು ಜನ ಶಿಕ್ಷಕರಿಗೆ ಸಮ. ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು ಎಂದು ಹೇಳಿದರು.

ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಮಾತನಾಡಿ, ಬಸವಣ್ಣನವರು ಸಾವಿರ ವರ್ಷಗಳ ಹಿಂದೆ ಅಕ್ಷರದ ಕ್ರಾಂತಿ ಮಾಡಿದರು. ಹೀಗಾಗಿ ಕೆಳವರ್ಗದ ಜನರೂ ಕೂಡ ವಚನ ಬರೆಯುಂತಾಯಿತು. ಕನ್ನಡ ಭಾಷೆ ಉಳಿವಿಗೆ ಬಸವಣ್ಣನವರು ಅನ್ಯ ರಾಜ್ಯಗಳಿಂದ ವಚನಕಾರರಿಂದ ಕನ್ನಡದಲ್ಲಿಯೇ ವಚನಗಳನ್ನು ಬರೆಯಿಸಿದರು. ಪ್ರಜಾಪ್ರಭುತ್ವ ಚಿಂತನೆ ಆರಂಭವಾಗಿದ್ದೆ ಬಸವನಬಾಗೇವಾಡಿಯಲ್ಲಿ ಎಂದರು.

ಮಧ್ಯಾಹ್ನ ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?’ ಎಂಬ ವಿಷಯಾಗಿ ವಿದ್ಯಾರ್ಥಿಗಳೊಂದಿಗೆ ಹಳೆಯ ಸಾಧಕ ವಿದ್ಯಾರ್ಥಿಗಳಾದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಅರುಣ ಉಳ್ಳಾಗಡ್ಡಿ, ಹಿರಿಯ ಕೆಎಎಸ್ ಅಧಿಕಾರಿ  ಮಮತಾ ಹೊಸಗೌಡರ, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರಮೇಶ ರೊಟ್ಟಿ, ಸಚಿನ ಚಲವಾದಿ, ಸಂಗಮೇಶ ದಿಡಗಿನಾಳ, ಪುಣೆಯ ಚಾರ್ಟರ್ಡ್ ಅಕೌಂಟಂಟ್ ವಾಣಿಶ್ರೀ ಅಮರಗೊಂಡ, ಸರಕಾರಿ ಅಭಿಯೋಜಕಿ ಗೀತಾ ಹೊಸಗಣಿಗೇರ, ಆರ್ಕಿಟೆಕ್ಟ್ ಸತೀಶ್ ನಡುವಿನಮನಿ ಸಂವಾದ ನಡೆಸಿದರು.

ಆಲಮಟ್ಟಿಯಲ್ಲಿ  ಹರ್ಡೇಕರ ಮಂಜಪ್ಪನವರ ಜೀವನವನ್ನು ಸಾರುವ ಥೀಮ್ ಪಾರ್ಕ್ ಅವಶ್ಯಕತೆಯನ್ನು ಒತ್ತಿ ಹೇಳಿದ ಶ್ರೀಗಳು, ಹರ್ಡೇಕರ ಅವರ ಆಶಯದಂತೆ ನಿಸರ್ಗ ಚಿಕಿತ್ಸಾ ಕೇಂದ್ರದ ಸ್ಥಾಪನೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.

ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣ   ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬೇಲೂರಿನ ಗುರುಬಸವ ಮಠದ ಮಹಾಂತ ಸ್ವಾಮೀಜಿ, ಗದಗದ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸದಾಶಿವ ದಳವಾಯಿ ಮಾತನಾಡಿದರು.

ಈ ವೇಳೆ ಎಂಪಿಎಸ್ ಮತ್ತು ಎಂಎಚ್‌ಎಂ  ಪ್ರೌಢ ಶಾಲೆಯ ಸುಮಾರು 70 ನಿವೃತ್ತ ಹಾಗೂ ಹಾಲಿ  ಶಿಕ್ಷಕರನ್ನು ಸನ್ಮಾನಿಸಲಾಯಿತು.  ಚಂದ್ರಶೇಖರ ನುಗ್ಲಿ, ಸಂಗಮೇಶ ಮೆಣಸಿನಕಾಯಿ, ವಿಠ್ಠಲ್ ಪಾಟೀಲ್, ಸಾವಿತ್ರಿ ಹಿರೆಗೊಂಡ, ಶೈಲಶ್ರೀ ಜೋಶಿ, ತನುಜಾ ಪೂಜಾರಿ, ಸಂಗಮೇಶ್ ಚನ್ನಿಗಾವಿ ಮುಂತಾದವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!