ಆರೋಪಿ ದರ್ಶನ್ ಮತ್ತು ಸುದ್ದಿ ವಾಹಿನಿಗಳು..!

77

ಪ್ರಜಾಸ್ತ್ರ ಡೆಸ್ಕ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿದಂತೆ 17 ಆರೋಪಗಳ ವಿಚಾರಣೆ ಕಳೆದ 10 ದಿನಗಳಿಂದ ನಡೆಯುತ್ತಿದೆ. ಈಗ ಎ1 ಆರೋಪಿ ಪವಿತ್ರಾಗೌಡ ಸೇರಿ 10 ಆರೋಪಿಗಳು ಜೈಲು ಸೇರಿದ್ದಾರೆ. ಎ2 ಆರೋಪಿ ದರ್ಶನ್ ಸೇರಿ 4 ಆರೋಪಿಗಳನ್ನು ಜೂನ್ 21ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಉಗುರಿಗೆ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡ್ರು ಎನ್ನುವಂತಾಗಿದೆ ನಟ ದರ್ಶನ್ ಪರಿಸ್ಥಿತಿ. ಅನಾವಶ್ಯಕವಾಗಿ ಇನ್ನೊಬ್ಬರ ವೈಯಕ್ತಿಕ ಬದುಕಿನಲ್ಲಿ ಅತಿಕ್ರಮಣ ಮಾಡಿ ರೇಣುಕಾಸ್ವಾಮಿ ಎಂಬಾತ ಹತ್ಯೆಯಾಗಿದ್ದಾನೆ. ಈ ಕೃತ್ಯ ಹಾಗೂ ಅಂದು ನಡೆದುಕೊಂಡ ರೀತಿ ನಿಜಕ್ಕೂ ಅಮಾನವೀಯವಾದದ್ದು. ಇದರಲ್ಲಿ ತಪ್ಪಿತಸ್ಥರಾದವರಿಗೆ ಈ ನೆಲದ ಕಾನೂನು ಏನು ಶಿಕ್ಷೆ ಕೊಡುತ್ತೊ ಅದನ್ನು ಅನುಭವಿಸಬೇಕು. ಆದರೆ, ಈ ಪ್ರಕರಣದಲ್ಲಿ ಸುದ್ದಿ ವಾಹಿನಿಗಳ ನಿರೂಪಕರು ನಡೆದುಕೊಳ್ಳುವ ರೀತಿ ನೋಡಿದರೆ ದರ್ಶನ್ ನಟನೆಯ ಕಾಟೇರ ಚಿತ್ರ ಇವರಿಗೆ ಇನ್ನಿಲ್ಲದಂತೆ ಕಾಡಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರ ಅತ್ಯಂತ ಯಶಸ್ಸು ಗಳಿಸಿತು. ಕಾರಣ ಕಥಾಹಂದರ. ಕನ್ನಡ ನೆಲದಲ್ಲಿ ಇವತ್ತಿನ ಹೊತ್ತಿಗೆ ಇಂತಹ ಚಿತ್ರಗಳ ಅವಶ್ಯಕತೆ ತುಂಬಾ ಇದೆ. ತಳಸಮುದಾಯ, ಶ್ರಮಿಕ ವರ್ಗದವರನ್ನು ಉಳ್ಳವರು ಶೋಷಿದ್ದು ಸಿನಿಮಾದಲ್ಲಿ ತೋರಿಸಿದ್ದಕ್ಕಿಂತ ಕ್ರೌರ್ಯವಾಗಿದೆ ಅನ್ನೋದು ಇತಿಹಾಸ ಹೇಳುತ್ತೆ. ಉಳುವವನೆ ಭೂಮಿ ಒಡೆಯ ಕಾಯ್ದೆಯ ಕಥಾವಸ್ತುವಿನ ಜೊತೆಗೆ ಜಾತಿ ವ್ಯವಸ್ಥೆಯ ಕರಾಳ ಮುಖ ಅನಾವರಣಗೊಳಿಸಿದೆ. ಕ್ಲೈಮ್ಯಾಕ್ಸ್ ನಲ್ಲಿ ಅಣ್ಣ ಬಸವಣ್ಣನ ವಚನದ ಮೂಲಕ ಪ್ರಭುತ್ವವಾದಿಗಳಿಗೆ ಚಾಟಿ ಬೀಸಲಾಗಿದೆ. ಹೀಗಾಗಿ ಬಹುತೇಕರು ಈ ಚಿತ್ರವನ್ನು ಒಪ್ಪಿಕೊಂಡರು. ಸಾಕಷ್ಟು ಚರ್ಚೆ, ವಿಮರ್ಶೆಗಳು ನಡೆದವು. ಇದರಿಂದ ಒಳಗೊಳಗೆ ಕುದಿಯುತ್ತಿದ್ದವರು ಈಗ ಸಿಕ್ಕ ಅವಕಾಶ ಬಳಸಿಕೊಂಡು ಕೆಂಡ ಕಾರುತ್ತಿದ್ದಾರೆ.

ಸುದ್ದಿ ವಾಹಿನಿಗಳ ನಿರೂಪಕರ ಮಾತುಗಳನ್ನು ಕೇಳಿದರೆ ನೋಡುಗರು ಕಿವಿ ಮುಚ್ಚಿಕೊಳ್ಳಬೇಕು. ಅವರ ಬಳಸುತ್ತಿರುವ ಪದ ಬಳಕೆ, ಮಾತನಾಡುವ ಶೈಲಿ, ಆಕ್ರೋಶದ ನುಡಿಯೊಳಗಿನ ಮುಖವಾಡ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರೆ ಕಳಚುತ್ತಿದ್ದಾರೆ. ಅವರೆಷ್ಟು ಸಜ್ಜನರು, ಸುಸಂಸ್ಕೃತರು ಎಂದು ಗೊತ್ತಾಗುತ್ತಿದೆ ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಕರಣದ ಕುರಿತು ಮಾಹಿತಿ, ಕಾನೂನು ಅರಿವು, ಯಶಸ್ಸು, ಕೀರ್ತಿ, ಜನಪ್ರಿಯತೆ ಬಂದ್ಮೇಲೆ ಯಾವ ರೀತಿಯಾಗಿ ನಡೆದುಕೊಳ್ಳಬಾರದು ಎನ್ನುವ ವಿಚಾರ ಸೇರಿ ಹಲವು ಚಿಂತನೆಯ ವಿಚಾರಗಳನ್ನು ತಿಳಿಸಿಕೊಡಲು ಅವಕಾಶಗಳಿದ್ದರೂ ಬರೀ ಬಾಯಿಗೆ ಬಂದಂತೆ ಬೈಗುಳಗಳ ಸುರಿಮಳೆ. ಮನಸ್ಸಿಗೆ ಬಂದಂತೆ ಮಾತನಾಡುವುದು, ಕಿರುಚಾಡುವುದೇ ಪತ್ರಕರ್ತನ ಕೆಲಸ ಎಂದುಕೊಂಡಂತೆ ವರ್ತಿಸುತ್ತಿದ್ದಾರೆ. ನಿರೂಪಕರು ಹಾಗೂ ಸುದ್ದಿ ವಾಹಿನಿಗಳ ಹಿನ್ನಲೆ ಬಗ್ಗೆ ಒಂದಿಷ್ಟು ತಿಳಿದುಕೊಂಡರೆ ಈ ಪ್ರಕರಣಕ್ಕೂ ಕಾಟೇರ ಚಿತ್ರದ ವಿಚಾರಕ್ಕೂ ಒಂದಿಷ್ಟು ಲಿಂಕ್ ಸಿಗಬಹುದೇನೋ ಅನ್ನೋದು ದರ್ಶನ್ ಅಭಿಮಾನಿಗಳ ಹಾಗೂ ಅನೇಕ ಪ್ರಜ್ಞಾವಂತ ನಾಗರೀಕರ ಮಾತುಗಳಾಗಿವೆ.




Leave a Reply

Your email address will not be published. Required fields are marked *

error: Content is protected !!