ಇವರ ಕೊಲೆಗೆ ನ್ಯಾಯ ಸಿಗುತ್ತಾ?

76

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಸ್ತುತ ಇಡೀ ದೇಶ ಕರ್ನಾಟಕದತ್ತ ನೋಡುತ್ತಿರುವ ಕಾರಣ ಸ್ಟಾರ್ ನಟ ದರ್ಶನ್ ಹಾಗೂ ಅವರ ಸಹಚರರ ಮೇಲೆ ಕೇಳಿ ಬಂದಿರುವ ಕೊಲೆ ಆರೋಪ. ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 17 ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಹೋಗಿದ್ದಾರೆ. ಪೊಲೀಸರ ನಡೆಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕ ಪೊಲೀಸರ ದಕ್ಷತೆ ಬಗ್ಗೆ ದೃಶ್ಯ ಮಾಧ್ಯಮಗಳು ಹಾಡಿ ಹೊಗಳುತ್ತಿವೆ. ಇದರ ಜೊತೆಗೆ ಧರ್ಮಸ್ಥಳದ ಸೌಜನ್ಯ ಪ್ರಕರಣ ಮತ್ತೆ ಮತ್ತೆ ಮುನ್ನಲೆಗೆ ಬರುತ್ತಿದೆ.

ಕೊಲೆಯಾದ ರೇಣುಕಾಸ್ವಾಮಿ ಅಮಾಯಕನಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ನಟ ದರ್ಶನ್ ಹಾಗೂ ಟೀಂ ಮಾಡಿದ್ದು ಸಹ ತಪ್ಪು ಎಂದು ಹೇಳಲಾಗುತ್ತಿದೆ. ಟಿವಿ ಮಾಧ್ಯಮಗಳು ಆರೋಪಿಗಳಿಗೆ ನೇಣು ಶಿಕ್ಷೆನೇ ಆಗಲಿ ಎನ್ನುವ ರೀತಿಯಲ್ಲಿ ಅಬ್ಬರಿಸಿ ಮಾತನಾಡುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಆದರೆ, ನಿರಂತರವಾಗಿ ಪ್ರಸಾರವಾಗುತ್ತಿರುವ ಸುದ್ದಿ, ಚರ್ಚೆ, ಸಂವಾದ, ನಿವೃತ್ತ ಪೊಲೀಸ್ ಅಧಿಕಾರಿಗಳು, ಪ್ರಸ್ತುತ ಪೊಲೀಸ್ ಅಧಿಕಾರಿಗಳ ಸಂದರ್ಶನಗಳಲ್ಲಿ ಎಲ್ಲಿಯೂ ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಪ್ರಶ್ನೆ ಕೇಳುತ್ತಿಲ್ಲ. ಕೃತ್ಯ ನಡೆದು ದಶಕ ಕಳೆದರೂ ನಿಜವಾದ ಕೊಲೆಗಾರರನ್ನು ಪತ್ತೆ ಮಾಡಲು ನಮ್ಮ ದಕ್ಷ, ಪ್ರಾಮಾಣಿಕ ಪೊಲೀಸರಿಗೆ ಯಾಕೆ ಆಗುತ್ತಿಲ್ಲ ಎಂದು ಕೇಳುತ್ತಿಲ್ಲ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಯಾವ ದೊಡ್ಡ ಮಟ್ಟದ ನಾಯಕರಿಂದಲೂ ಒತ್ತಡವಿಲ್ಲವೆಂದು ಹೇಳಲಾಗುತ್ತಿದೆ. ಇದು ಒಳ್ಳೆಯದು. ದಿನದ 24 ಗಂಟೆಯೂ ಈ ಸುದ್ದಿ ಮಾಡುತ್ತಿರುವ ಟಿವಿ ಮಾಧ್ಯಮಗಳು ದರ್ಶನ್ ಪತ್ನಿಯ ಕಾರಿನ ಬ್ಯಾನೆಟ್ ಮೇಲೇರಿ ವಿಡಿಯೋ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ. ಪ್ರಭಾವಿಗಳನ್ನು ಎದುರು ಹಾಕಿಕೊಂಡು ಸುದ್ದಿ ಮಾಡುತ್ತೇವೆ. ನ್ಯಾಯ ಕೊಡಿಸುತ್ತೇವೆ ಎಂದು ಎದೆ ತಟ್ಟಿಕೊಳ್ಳುವ ಟಿವಿ ಮಾಧ್ಯಮದವರು ಸಾಮಾನ್ಯ ಜನರಾಗಿರುವ ಸೌಜನ್ಯ ಕುಟುಂಬಸ್ಥರನ್ನು ಭೇಟಿಯಾಗಿ ಮಾತನಾಡಿ, ನಿರಂತರ ಸುದ್ದಿ ಮಾಡಿ ಸರ್ಕಾರವನ್ನು, ಪೊಲೀಸ್ ಇಲಾಖೆಯನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎನ್ನುವ ಕೂಗು ಸಾರ್ವಜನಿಕರಿಂದ ಎದ್ದಿದೆ.

ಸೌಜನ್ಯ ಪ್ರಕರಣದಲ್ಲಿ ಪ್ರಭಾವಿಗಳು ಪಾತ್ರವೇ ಇಲ್ಲದೆ ಹೋಗಿದ್ದರೆ, ಅಮಾಯಕ ಹುಡುಗಿಯ ಮೇಲಿನ ಕೃತ್ಯದಲ್ಲಿ ದೊಡ್ಡ ದೊಡ್ಡವರು ಭಾಗಿಯಾಗದೆ ಹೋಗಿದ್ದರೆ ನಿಜವಾದ ಅಪರಾಧಿಗಳು ಅದಾಗಲೇ ಜೈಲು ಪಾಲಾಗುತ್ತಿದ್ದರು. ಅವರೆಲ್ಲರ ಪ್ರಭಾವ, ಒತ್ತಡ ಎಲ್ಲರ ಬಾಯಿ ಮುಚ್ಚಿಸಿ ಈಗ ದರ್ಶನ್ ಪ್ರಕರಣದಲ್ಲಿ ಶಬ್ಬಾಷಿಗಿರಿ ತೆಗೆದುಕೊಳ್ಳಲು ನೋಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು, ಸಾರ್ವಜನಿಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಯಾರನ್ನ ಬೇಕಾದರೂ ನಾವು ಪ್ರಶ್ನೆ ಮಾಡಬಹುದು, ನಾವು ಪ್ರಶ್ನಾತೀತರು ಎನ್ನುವಂತೆ ವರ್ತಿಸುತ್ತಿರುವ ಸುದ್ದಿ ವಾಹಿನಿಗಳು ಇದಕ್ಕೆ ಉತ್ತರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!