ಜಿಲ್ಲೆಯಲ್ಲಿನ ಉದ್ಯಮಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ: ಕಾಂತಾ ನಾಯಕ

101

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಯುವಕ ಯುವತಿಯರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಸ್ವಯಂ ಉದ್ಯೋಗ ಸ್ಥಾಪನೆ ಮಾಡುವಂತೆ ಪ್ರೇರೆಪಿಸಬೇಕು ಎಂದು ಕನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ ಅವರು ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 9 ಬೃಹತ್ ಪ್ರಮಾಣದ ಸಕ್ಕರೆ ಕಾರ್ಖಾನೆಗಳಿದ್ದು, 2022-23ನೇ ಸಾಲಿನಲ್ಲಿ ಒಟ್ಟು 9,476 ಉದ್ಯಮಗಳು ನೋಂದಣಿಯಾಗಿರುತ್ತವೆ. ಕೌಶಲ್ವಾಭಿವೃದ್ಧಿ ಇಲಾಖೆಯೆ ಮುಖಾಂತರ ನಿರುದ್ಯೋಗಿ ಯುವಕ, ಯುವತಿಯರಿಗೆ ಅವರ ಅನುಭವ ಕೌಶಲ್ಯಗಳ ಆಧಾರದ ಮೇಲೆ ತರಬೇತಿಯನ್ನು ನೀಡಿ ಉದ್ಯೋಗ ಸೃಷ್ಟಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಉದ್ಯಮ, ಇಂಡಸ್ಟ್ರಿಗಳಲ್ಲಿ ಸ್ಥಳೀಯ ಜನರಿಗೆ ಆಧ್ಯತೆಯನ್ನು ನೀಡಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಗೊಳಿಸಲು ಕಾರ್ಯಪ್ರವರ್ತರಾಗಬೇಕು.  ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಸಿಎಸ್‌ಆರ್ ಅನುದಾನ ಪಡೆದು ನಿರುದ್ಯೋಗ ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರನ್ನು ಉದ್ಯೋಗದಲ್ಲಿ ತೊಡಗುವಂತೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಜಿಲ್ಲೆಯು ಪ್ರವಾಸೋಧ್ಯಮಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭವಾಗುವುದರಿಂದ ಪ್ರವಾಸಿ ಗೈಡ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸ್ಥಳೀಯರು ಉದ್ಯೋಗವಕಾಶ ಪಡೆದುಕೊಳ್ಳಲು ಅನುಕೂಲವಾಗುವ ತರಬೇತಿ ಕಾರ್ಯಕ್ರಮಗಳನ್ನು ಸೃಜಿಸಿ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಸಿಡಾಕ್‌ನ ವತಿಯಿಂದ ತರಬೇತಿಯನ್ನು ಪಡೆದು ಸ್ವಯಂ ಉದ್ಯಮ ಸ್ಥಾಪಿಸಿದ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಅಬ್ದುಲ್ ಹಮೀದ್ ಮುಶ್ರೀಫ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಸಿ.ಬಿ. ಕುಂಬಾರ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಸಿಡಾಕ್ ಜಂಟಿ ನಿರ್ದೇಶಕ ಎಸ್.ಬಿ. ಬಳ್ಳಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!