ಪಂಚಾಯ್ತಿ ಅಧ್ಯಕ್ಷ ಸ್ಥಾನ ಚುನಾವಣೆ, ಮಹಿಳೆಗೆ ಬೆದರಿಕೆ ಖಂಡಿಸಿ ಪ್ರತಿಭಟನೆ

107

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಅರಳಗುಂಡಗಿ ಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ಜೂನ್ 27ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ಸದಸ್ಯೆ ಸಪ್ನಾ ನಿಂಗರಾಜ ಕಡಿ ಅನ್ನೋ ದಲಿತ ಮಹಿಳೆ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಪಂಚಾಯ್ತಿಯ ಕೆಲ ಸದಸ್ಯರು, ಗ್ರಾಮದ ಕೆಲ ಮುಖಂಡರು ಸ್ಪರ್ಧಿಸದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಸಿಂದಗಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮಘರ್ಜನೆ) ತಾಲೂಕು ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಗಿದೆ.

ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಂಗಾಮಿ ಅಧ್ಯಕ್ಷೆಯಾದ ಸಪ್ನಾ ನಿಂಗರಾಜ ಕಡಿ ಅವರು ಪಂಚಾಯ್ತಿಯ ಎಲ್ಲ ಕೆಲಸಗಳನ್ನು  ಕಾಳಜಿಯಿಂದ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಗ್ರಾಮದ ಪ್ರಮುಖರು ಇವರನ್ನು ಅಧ್ಯಕ್ಷರನ್ನಾಗಿ ಮಾಡೋಣವೆಂದು ಚರ್ಚೆ ಮಾಡಿದ್ದಾರೆ. ಆದರೆ, ಇದಕ್ಕೆ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಸಪ್ಮಾ ನಿಂಗರಾಜ ಕಡಿ ಅವರಿಗೆ ನ್ಯಾಯ ಕೊಡಿಸಬೇಕು. ಪೊಲೀಸ್ ಠಾಣೆಗೆ ಹೋದರೂ ಸೂಕ್ತ ನ್ಯಾಯ ಕೊಡಿಸದ ಪಿಎಸ್ಐ ವೆಂಕಟಪ್ಪ ನಾಯಕ ಇವರನ್ನು ಅಮಾನತುಗೊಳಿಸಬೇಕು. ಜಾತಿ ನಿಂದನೆ ಮಾಡಿದ 6 ಜನರ ಮೇಲೆ ಪ್ರಕರಣ ದಾಖಲಿಸಬೇಕು. ಸಪ್ನಾ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಬೇಕು ಎನ್ನುವ ಬೇಡಿಕೆಯೊಂದಿಗೆ ತಹಶೀಲ್ದಾರ್ ಮೂಲಕ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಾಗಿದೆ.

ಈ ವೇಳೆ ರಾಜ್ಯ ಸಂಚಾಲಕ ಸಿದ್ದು ಮೇಲಿನಮನಿ, ಜಿಲ್ಲಾ ಸಂಚಾಲಕ ರಾಘವೇಂದ್ರ ಗುಡಿಮನಿ, ತಾಲೂಕು ಸಹ ಸಂಚಾಲಕ ದೇವೀಂದ್ರ ದೊಡಮನಿ, ಷಣ್ಮುಖ ವಾಲಿಕಾರ, ಶರಣಪ್ಪ ಕಡಿ, ಖಾಜು ಹರಿಜನ, ನಿಂಗಣ್ಣ ಹರಿಜನ, ಜೇಟಪ್ಪ, ಅಶೋಜ ಹರಿಜನ, ಅಮೋಗಿ ಹರಿಜನ, ರಾಜು ನೊಲ್ಲಾ, ಪ್ರಭು ಹತ್ತರಕಿಹಾಳ, ಸಂತೋಷ, ದವಲತ, ಗುರು ಬಮ್ಮನಜೋಗಿ, ದೇವೀಂದ್ರ ಬಿರಾದಾರ, ಸಲೀಂ ನಡುವಿನಮನಿ, ರಮೇಶ ದಲಾಳ್ಳಿ, ಗೊಲ್ಲಾಳ ಬೇಚನಾಳ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!