ಹಾವೇರಿ ಅಪಘಾತ ದುರಂತ: ರಾಷ್ಟ್ರಪತಿ ಮುರ್ಮು ಸಂತಾಪ

64

ಪ್ರಜಾಸ್ತ್ರ ಸುದ್ದಿ

ಹಾವೇರಿ: ಶುಕ್ರವಾರ ಮುಂಜಾನೆ ಗುಂಡನಹಳ್ಳಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಮಕ್ಕಳು, ಮಹಿಳೆಯರು ಸೇರಿ 13 ಜನರು ಮೃತಪಟ್ಟಿರುವ ವಿಚಾರ ತಿಳಿದು ತೀವ್ರ ದುಃಖವಾಗಿದೆ. ಮೃತ ಕುಟುಂಬಸ್ಥರಿಗೆ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ವೈಯಕ್ತಿಕವಾಗಿ ಮೃತರ ಕುಟುಂಬಸ್ಥರಿಗೆ ತಲಾ 50 ಸಾವಿರ ರೂಪಾಯಿ ಸಹಾಯಧನ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಹಣ ನೀಡಿದರು.

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಪರಶುರಾಮ್, ನಾಗೇಶ್, ಭಾಗ್ಯ, ಪುಣ್ಯ, ಸುಭದ್ರಬಾಯಿ, ವಿಶಾಲಾಕ್ಷ್ಮಿ, ಮಂಜುಳಾಬಾಯಿ, ರೂಪಾ, ಮಂಜುಳಾ, ಮಾನಸಿ ಹಾಗೂ ಟಿಟಿ ವಾಹನ ಚಾಲಕ ಆದರ್ಶ್ ಮೃತ ದುರ್ದೈವಿಗಳು.

ಮೃತರು ಒಂದೇ ಕುಟುಂಬದವರು ಹಾಗೂ ಸಂಬಂಧಿಕರಾಗಿದ್ದಾರೆ. ಇತ್ತೀಚೆಗೆ ಹೊಸದಾಗಿ ಟಿಟಿ ವಾಹನ ತೆಗೆದುಕೊಂಡಿದ್ದರು. ಹೀಗಾಗಿ ಬೆಳಗಾವಿಯ ಚಿಂಚಲಿ ಮಾಯಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ಸವದತ್ತಿ ಯಲ್ಲಮ್ಮನ ದರ್ಶನ ಮಾಡಿ ಊರಿಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!