ಸ್ವಾಮಿ ವಿವೇಕಾನಂದ, ಚನ್ನಮ್ಮ ಪುತ್ಥಳಿ ಪ್ರತಿಷ್ಠಾಪನೆ

116

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಜೂನ್ 12ರಂದು ಕಾಲ ಕೂಡಿ ಬಂದಿತು. ಶಾಸಕ ಅಶೋಕ ಮನಗೂಳಿ ಹಾಗೂ ಸ್ವಾಮೀಜಿಗಳ ಸಮ್ಮುಖದಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲಾಯಿತು.

ಇನ್ನು ವಿಜಯಪುರ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಕಿತ್ತೂರರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಸಹ ಇದೇ ವೇಳೆ ಪುತ್ಥಳಿ ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮೊದಲು ಎರಡೂ ಪುತ್ಥಳಿಗಳ ಭವ್ಯ ಮೆರವಣಿಗೆ ಕನಕದಾಸ ವೃತ್ತದಿಂದ ಸಾಗಿ ಬಂದಿತು.

ಈ ವೇಳೆ ಮಾತನಾಡಿದ ಶಾಸಕ ಅಶೋಕ ಮನಗೂಳಿ, ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಎರಡೂ ಮೂರ್ತಿಗಳ ಪ್ರತಿಷ್ಠಾಪನೆ ನನ್ನ ಅವಧಿಯ್ಲಲಿಯೇ ಸಾಕಾರಗೊಂಡದ್ದು ನನಗೆ ಹರ್ಷ ತಂದಿದೆ. ಈ ಮೂರ್ತಿಗಳ ಅನಾವರಣ ಕಾರ್ಯಕ್ರಮವು ಟಿಪ್ಪು ಸುಲ್ತಾನ ವೃತ್ತದ ಕಾಮಗಾರಿ ಪೂರ್ಣಗೊಂಡ ನಂತರ ಮೂರೂ ಮೂರ್ತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಹರಗುರು ಚರಮೂರ್ತಿಗಳ ಸಾನಿಧ್ಯ, ರಾಜಕೀಯ ದುರಿಣರ ಸಮ್ಮುಖ ಹಾಗೂ ಮುಖ್ಯಮಂತ್ರಿಗಳ ಹಸ್ತದಿಂದ ನೆರವೇರಿಸಲಾಗುವುದು ಎಂದು ಹೇಳಿದರು.

ರಾಣಿ ಚನ್ನಮ್ಮ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮೂರ್ತಿಗಳು ಭವ್ಯ ಹಾಗೂ ನಯನ ಮನೋಹರವಾಗಿವೆ. ವಿಜಯಪುರ ಜಿಲ್ಲೆಯಲ್ಲಿಯೇ ಇಂತಹ ಭವ್ಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಸಿಂದಗಿಯಲ್ಲಿಯೇ ಪ್ರಥಮ ಎಂದು ಕೂಡಲಸಂಗಮ ಜಗದ್ಗುರು ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಚನ್ನಮ್ಮ ವೃತ್ತಕ್ಕೆ ಸ್ಥಳಾವಕಾಶ ನೀಡಿದ ಆಲಮೇಲದ ಶೌಕತ್‌ಅಲಿ ಸುಂಬಡ ಅವರಿಗೆ ಹಾಗೂ ಎರಡೂ ಮೂರ್ತಿಗಳ ತಯಾರಕ ಬೆಂಗಳೂರು ಬಿಡದಿಯ ಶಿಲ್ಪಕಾರ ವಿಜಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಸಂಗಿಹಾಳ ಶ್ರೀಮಠದ ಶಂಕರಲಿಂಗ ಮಹಾರಾಜರು, ಊರನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ಆದಿಶೇಷ ಶ್ರೀಮಠದ ನಾಗರತ್ನ ವೀರಾಜೆಂದ್ರ ಮಹಾಸ್ವಾಮಿಗಳು, ವಿರಕ್ತಮಠದ ಬಸವಪ್ರಭು ಶ್ರೀಗಳು, ಹಿಕ್ಕಣಗುತ್ತಿ ಲಿಂಗಾಯತ ಮಠದ ಪ್ರಭುಲಿಂಗ ಶರಣರು ಸೇರಿದಂತೆ ಎರಡು ಸಮಿತಿಯ ಮುಖಂಡರು, ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!