ವಿಜಯಪುರ: ನಾಳೆ ಮತ ಎಣಿಕೆ, ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ, ಸಿಇಒ

80

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಲೋಕಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.

ವಿಜಯಪುರ ಮೀಸಲು(ಪ.ಜಾ) ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸೋಮವಾರದಂದು ಚುನಾವಣಾ ವೀಕ್ಷಕರೊಂದಿಗೆ ಅಂತಿಮ ಹಂತದ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮತ ಎಣಿಕೆ ಆರಂಭಕ್ಕೆ ಮುನ್ನ ಬೆಳಿಗ್ಗೆ 7ಗಂಟೆಗೆ ಮತಯಂತ್ರಗಳನ್ನು ಇರಿಸಿದ ಭಧ್ರತಾ ಕೊಠಡಿಗಳನ್ನು ಚುನಾವಣಾ ವೀಕ್ಷಕರು, ಉಮೇದುವಾರರು ಹಾಗೂ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಯ ದಿನವಾದ ಮಂಗಳವಾರದ ಬೆಳಿಗ್ಗೆ 8 ಗಂಟೆಯವರೆಗೂ ಪೋಸ್ಟಲ್ ಬ್ಯಾಲೆಟ್ ಗಳನ್ನು ಸ್ವೀಕರಿಸಲಾಗುತ್ತದೆ.

ಸೈನಿಕ ಶಾಲೆಯ ಒಡೆಯರ ಸದನದಲ್ಲಿ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಆದಿಲ್‌ಶಾಹಿ ಸದನದಲ್ಲಿ ಬಸವನ ಬಾಗೇವಾಡಿ ಮತ್ತು ಬಬಲೇಶ್ವರ ಕ್ಷೇತ್ರ, ಹೊಯ್ಸಳ ಸದನದಲ್ಲಿ ವಿಜಯಪುರ ನಗರ ಮತ್ತು ನಾಗಠಾಣ ಕ್ಷೇತ್ರ, ವಿಜಯಪುರ ಸದನದಲ್ಲಿ ಇಂಡಿ ಮತ್ತು ಸಿಂದಗಿ ಕ್ಷೇತ್ರ ಹಾಗೂ ಹೊಯ್ಸಳ ಸದನದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಆಯಾ ವಿಧಾನಸಭೆ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ ಕಾರ್ಯ ಕೈಗೊಳ್ಳಲು ಪ್ರತಿ ವಿಧಾನಸಭೆ ಮತಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 8 ಮತಕ್ಷೇತ್ರಗಳಿಗೆ 112 ಟೇಬಲ್‌ ಹಾಗೂ ಅಂಚೆ ಮತಪತ್ರಗಳ ಎಣಿಕೆ ಕಾರ್ಯಕ್ಕಾಗಿ 12 ಟೇಬಲ್‌ ಹಾಗೂ ಇಟಿಪಿಬಿಎಸ್ ಮತಪತ್ರಗಳ ಸ್ಕ್ಯಾನಿಂಗ್ ಕಾರ್ಯವನ್ನು 6 ಟೇಬಲ್‌ಗಳಲ್ಲಿ ಕೈಗೊಳ್ಳಲಾಗುತ್ತಿದೆ.

ಒಟ್ಟು 124 ಟೇಬಲ್ ಗಳಿಗೆ 12ಜನ ಸಹಾಯಕ ಚುನಾವಣಾ ಅಧಿಕಾರಿಗಳು, 124 ಸೂಪರ್ ವೈಸರ್, 136 ಅಸಿಸ್ಟೆಂಟ್ ಸೂಪರ್ ವೈಸರ್, 124 ಮೈಕ್ರೋ ಅಬ್ಸ್ ರವರ್, 87 ಜನ ರಿಸರ್ವ್ ಸಿಬ್ಬಂದಿ ಸೇರಿದಂತೆ ಒಟ್ಟು 483 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆ ಸಂಪೂರ್ಣ ನಿಷೇಧಿಸಲಾಗಿರುತ್ತದೆ. ಇದಲ್ಲದೇ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಕಲಂ ೧೪೪ರ ಅನ್ವಯ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ.

ಈ ಮೊದಲು ಮತ ಎಣಿಕೆ ಕೊಠಡಿ, ಪಾರ್ಕಿಂಗ್, ಭದ್ರತಾ ಸಿಬ್ಬಂದಿ ನಿಯೋಜನೆ, ಊಟೋಪಹಾರ ವ್ಯವಸ್ಥೆ, ಮಾಧ್ಯಮ ಕೇಂದ್ರ ಮತ್ತಿತರ ಸೌಕರ್ಯಗಳ ಕುರಿತು ಚುನಾವಣಾ ವೀಕ್ಷಕರಾದ ಡಾ.ರತನಕನ್ವರ ಗಂದವಿಚರಣ, ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಶೀಲ್ದಾರ್ ಕವಿತಾ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!