ಗುರುವಿಗೆ ಗೆಲುವಿನ ಉಡುಗರೆ ಕೊಟ್ಟು ಕೊಹ್ಲಿ-ಶರ್ಮಾ ವಿದಾಯ

77

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶನಿವಾರ ಸಂಜೆ ನಡೆದ ಐಸಿಸಿ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆಲ್ಲುವ ಮೂಲಕ 17 ವರ್ಷಗಳ ಬಳಿಕ 2ನೇ ಬಾರಿಗೆ ಚುಟುಕು ಕ್ರಿಕೆಟ್ ಜಗತ್ತಿನ ಚಾಂಪಿಯನ್ಸ್ ಆಗಿದ್ದಾರೆ. ಈ ಮೂಲಕ ಹಲವು ದಾಖಲೆಗಳು ಸಹ ನಿರ್ಮಾಣವಾಗಿವೆ.

ಇಡೀ ಟೂರ್ನಿಯಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ ಮೇಲೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ವಿಶ್ವಾಸ ಇಟ್ಟಿದ್ದರು. ಇಬ್ಬರು ಸಹ ಫೈನಲ್ ಆಟಕ್ಕಾಗಿ ಅವರು ಏನೋ ಮಾಡುತ್ತಾರೆ ಎಂದಿದ್ದರು. ಅದರಂತೆಯೇ ಕೊಹ್ಲಿ ಕಪ್ ಗೆಲುವಿನ ಹೋರಾಟದಲ್ಲಿ ಅಮೂಲ್ಯ 76 ರನ್ ಗಳ ಕೊಡುಗೆ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗುರುವಿಗೆ ಉಡುಗರೆ ನೀಡಿದ ಕೊಹ್ಲಿ-ಶರ್ಮಾ

ಇನ್ನು ಟೀಂ ಇಂಡಿಯಾ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅವಧಿ ಸಹ ಮುಗಿದಿದೆ. ಅವರ ಸ್ಥಾನಕ್ಕೆ ಯಾರು ಬರುತ್ತಾರೆ ಕಾದು ನೋಡಬೇಕು. ಹೀಗಾಗಿ ಕೋಚ್ ಆಗಿಯೂ ಸಾಧಿಸುವ ಕನಸು ಕಂಡಿದ್ದ ರಾಹುಲ್ ಕೊನೆಗೂ ಸಾಧಿಸಿದರು. ಅವರ ಹುಡುಗರು ಅವರ ಕನಸನ್ನು ನನಸು ಮಾಡಿದರು. ಇದರೊಂದಿಗೆ ಒಳ್ಳೆಯ ವಿದಾಯ ಸಿಕ್ಕಿದೆ.

ಏಕದಿನ ವಿಶ್ವಕಪ್ ಗೆಲ್ಲುವ ಸಂದರ್ಭದಲ್ಲಿಯೂ ದ್ರಾವಿಡ್ ಇರಲಿಲ್ಲ. ಮೊದಲ ಟಿ-20 ವರ್ಲ್ಡ್ ಕಪ್ ವೇಳೆಯೂ ಇರಲಿಲ್ಲ. ಈ ಎರಡರಲ್ಲಿದ್ದ ಕೊಹ್ಲಿ, ಟಿ-20 ವರ್ಲ್ಡ್ ಕಪ್ ಟೈಂನಲ್ಲಿದ್ದ ರೋಹಿತ್ ಶರ್ಮಾ ಗುರುವಿಗೆ ಒಳ್ಳೆಯ ಉಡುಗರೆ ನೀಡಿ ಅವಿಸ್ಮರಣೀಯಗೊಳಿಸಿದರು.

ಚುಟುಕು ಕ್ರಿಕೆಟ್ ಅಂಗಳಕ್ಕೆ ಕೊಹ್ಲಿ-ಶರ್ಮಾ ವಿದಾಯ

ವಿಶ್ವಕಂಡ ಶ್ರೇಷ್ಠ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೆ ಬಂದಿದ್ದಾರೆ. ರನ್ ಮಷಿನ್, ಕಿಂಗ್ ಕೊಹ್ಲಿ ಅಂತಾನೆ ಪ್ರಖ್ಯಾತಿ ಪಡೆದಿದ್ದಾರೆ. ಸರ್ವಕಾಲಿಕ ಶ್ರೇಷ್ಠ ಆಟಗಾರ ಸಚಿನ್ ತಂಡೂಲ್ಕರ್ ಅವರ ಅದೆಷ್ಟೋ ದಾಖಲೆಗಳನ್ನು ಉಡೀಸ್ ಮಾಡಿದ ವಿರಾಟ್ ಕೊಹ್ಲಿ ಟಿ-20 ಆಟಕ್ಕೆ ವಿದಾಯ ಹೇಳಿ ಹೊಸಬರು ತಂಡವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದಿದ್ದಾರೆ.

ಇನ್ನು ನಾಯಕನಾಗಿ ಏಕದಿನ ವಿಶ್ವಕಪ್ ನಲ್ಲಿ ಫೈನಲ್ ವರೆಗೂ ಬಂದು ಸೋಲಿನ ಕಹಿ ಅನುಭವಿಸಿದ್ದ ರೋಹಿತ್ ಶರ್ಮಾ ಟಿ-20 ವಿಶ್ವಕಪ್ ಗೆದ್ದು ಅದನ್ನು ಮರೆಯುವಂತೆ ಮಾಡಿದರು. ಸ್ಫೋಟಕ ಆಟಕ್ಕೆ ಹೆಸರಾದ ಶರ್ಮಾ ಬ್ಯಾಟಿನಿಂದಲೂ ಸಾಕಷ್ಟು ದಾಖಲೆಗಳು ಬಂದಿವೆ. ಇವರು ಸಹ ಟಿ-20 ಅಂಗಳಕ್ಕೆ ವಿದಾಯ ಹೇಳಿದ್ದಾರೆ. 35ರ ಕೊಹ್ಲಿ, 37ರ ಶರ್ಮಾ ಒಂದೊಳ್ಳೆ ನಿರ್ಧಾರ ತೆಗೆದುಕೊಂಡು ತಮ್ಮ ನಿವೃತ್ತಿಯನ್ನು ಸಿಹಿಯಾಗಿಸಿಕೊಂಡಿರುವುದು ಖುಷಿಯ ಕ್ಷಣವಾಗಿದೆ. ಉಳಿದಂತೆ ಇವರಿಬ್ಬರು ಏಕದಿನ, ಟೆಸ್ಟ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಸ್ವಲ್ಪ ಕಾಲವಾಗಿರಲಿದೆ.




Leave a Reply

Your email address will not be published. Required fields are marked *

error: Content is protected !!