ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ ಸಿಇಒ

65

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಶಾಲಾ ಆವರಣವೂ ಸೇರಿದಂತೆ ಶಾಲಾ ಪರಿಸರವನ್ನು ಶುಚಿತ್ವವಾಗಿಟ್ಟುಕೊಳ್ಳಬೇಕು ಎಂದು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸೂಚನೆ ನೀಡಿದರು. ಶನಿವಾರ ದೇವರ ಹಿಪ್ಪರಗಿ ತಾಲೂಕಿನ ನಿವಾಳಖೇಡ ಹಾಗೂ ಕಡ್ಲೇವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಈ ಸೂಚನೆ ನೀಡಿದ್ದಾರೆ.

ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಳಖೇಡ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ  ಶಾಲೆಯಲ್ಲಿನ ಅಡುಗೆ ಕೊಠಡಿ ಪರಿಶೀಲನೆ ನಡೆಸಿ, ಅಲ್ಲಿ ಸಿದ್ಧಪಡಿಸಲಾದ ಬಿಸಿಊಟ ಆಹಾರ ಸೇವಿಸಿ ರುಚಿ-ಗುಣಮಟ್ಟ ಪರೀಕ್ಷಿಸಿದರು. ಮಕ್ಕಳಿಗೆ ಒದಗಿಸಲಾಗುವ ಬಿಸಿ ಊಟ ಪೌಷ್ಟಿಕಾಂಶದಿಂದ ಕೂಡಿರಬೇಕು ಆಹಾರದಲ್ಲಿ ಯಥೇಚ್ಛವಾಗಿ ತರಕಾರಿ ಜೊತೆಗೆ ವಿವಿಧ ಬಗೆಯ ಬೇಳೆ ಪದಾರ್ಥ ಬಳಸಬೇಕು. ಕುಡಿಯಲು ಶುದ್ಧ ನೀರು ಒದಗಿಸಬೇಕು. ಶಾಲಾ ಆವರಣದಲ್ಲಿನ ಕಿಚನ್ ಗಾರ್ಡನ್ ಮಾಡಿ, ಶಾಲಾ ಆವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು  ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.

ನಿರ್ಮಾಣ ಹಂತದ ಕಟ್ಟಡದ ಕೊಠಡಿಗಳಿಗೆ ಸರಾಗವಾಗಿ ಗಾಳಿ ಬೆಳಕು ಇರುವ ನಿಟ್ಟಿನಲ್ಲಿ ಗುಣಮಟ್ಟದಿಂದ ಕೂಡಿರುವ ಕಿಟಕಿ, ಫ್ಯಾನ್ ಮತ್ತು ಟ್ಯೂಬ್ ಲೈಟ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರು ನಿಲ್ಲದೇ ಸರಾಗವಾಗಿ ಸಾಗಲು ಸುವ್ಯಸ್ಥಿತ ಚರಂಡಿ ವ್ಯವಸ್ಥೆಗೆ ಕ್ರಮವಹಿಸಬೇಕು. ಮಳೆಗಾಲದ ಸಂದರ್ಭವಾಗಿರುವುದರಿಂದ ಸಾಂಕ್ರಾಮಿಕ ರೋಗ, ಕೀಟಜನ್ಯ ರೋಗಗಳ ಕುರಿತು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಗ್ರಾಮಸ್ಥರಿಗೆ ಜಾಗ್ರತೆ ಮೂಡಿಸಬೇಕು. ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಬೇಕು, ಕಸ ವಿಲೇವಾರಿ ಮಾಡುವ ವಾಹನಕ್ಕೆ ಸ್ವ-ಸಹಾಯ ಸಂಘದ ಮಹಿಳಾ ಚಾಲಕರಿಗೆ ಉದ್ಯೋಗ ನೀಡಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕರೂಗಿ ಗ್ರಾಮ ಪಂಚಾಯತಿಯಡಿಯಲ್ಲಿ ಬರುವ ಕಡ್ಲೇವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಿಇಒ ಅವರು ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಗುರುತಿಸಿ, ತೆರವು  ಮಾಡಿ, ಅಂತಹ ಶಾಲಾ ಕೊಠಡಿಗಳನ್ನು ಬಳಸಬಾರದು. ಶಾಲಾ ಕಂಪೌಂಡ್ ನಿರ್ಮಾಣ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬಿಸಿ ಊಟ ಸಿದ್ಧಪಡಿಸುವ ಅಡುಗೆ ಕೊಠಡಿಯನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಸ್ವಚ್ಛ ಮತ್ತು ಶುದ್ಧ ವಾತಾವರಣ ಕಲ್ಪಿಸಬೇಕು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು. ಶಾಲಾ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ ಸ್ವಚ್ಛತಾ ಕ್ರಮ, ಕುಡಿಯುವ ನೀರು, ಶಾಲಾ ಗೇಟ್ ನಿರ್ಮಾಣ ಆದ್ಯತೆ ಮೇಲೆ ನಿರ್ವಹಿಸಿ, ಒಂದು ವಾರದೊಳಗಾಗಿ ವರದಿ ಸಲ್ಲಿಸುವಂತೆ ಮುಖ್ಯೋಪಾಧ್ಯಾಯರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಈಗಾಗಲೇ ನರೇಗಾ ಯೋಜನೆಯಲ್ಲಿ ಶಾಲಾ ಕಂಪೌಂಡ್, ಕಿಚನ್ ಗಾರ್ಡನ್, ಶುದ್ಧ ಕುಡಿಯುವ ನೀರು ಮಕ್ಕಳಿಗೆ ನೀಡುವಂತೆ ಪಿಡಿಓ ಅವರಿಗೆ ಸೂಚಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ಈ ಸಂದರ್ಭದಲ್ಲಿ ಚಿಕ್ಕರೂಗಿ ಗ್ರಾಪಂ ಅಧ್ಯಕ್ಷ ಸಿದ್ಧಗೊಂಡಪ್ಪಗೌಡ ಪಾಟೀಲ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ನರೇಗಾ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಎಇಇ ಜಿ.ವೈ ಮುರಾಳ, ಮುಖ್ಯೋಪಾಧ್ಯಾಯರಾದ ಆರ್.ಎಸ್ ಬಿರಾದಾರ, ಎ.ವಿ ತಳಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ  ಜಿ.ಸಿ ಕನ್ನೋಳಿ ತಾಂತ್ರಿಕ ಸಂಯೋಜಕ ಶರಣಗೌಡ, ಸಿಡಿಪಿಓ ಶಂಭುಲಿಂಗ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!