ಗೋದಾಮುಗಳಿಗೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ

95

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ವಿಜಯಪುರ ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಸಗಟು ಮಳಿಗೆಗಳು/ಗೋದಾಮುಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅನ್ನಭಾಗ್ಯ ಯೋಜನೆ, ಮಧ್ಯಾಹ್ನ ಬಿಸಿಯೂಟ ಯೋಜನೆ ಹಾಗೂ ವಸತಿ ನಿಲಯಗಳಿಗೆ ಸರಬರಾಜು ಮಾಡುವ ಆಹಾರ ದಾನ್ಯಗಳಾದ ಅಕ್ಕಿ, ಗೋಧಿ, ಸೂರ್ಯಕಾಂತಿ ಎಣ್ಣೆಗಳ ಗುಣಮಟ್ಟ ಪರಿಶೀಲಿಸಿದರು. ಮಳಿಗೆಗಳಲ್ಲಿ ದಾಸ್ತಾನು ನಿರ್ವಹಣೆ ವ್ಯವಸ್ಥಿತವಾಗಿ ಮಾಡಬೇಕು. ವಿವಿಧ ವಸತಿ ನಿಲಯ, ಸರ್ಕಾರಿ ಶಾಲೆಗಳಿಗೆ ನಿಗದಿತ ಅವಧಿಯಲ್ಲಿ ಯಾವುದೇ ತೊಂದರೆಯಾಗದಂತೆ ದಾಸ್ತಾನು ಸರಬರಾಜು ಮಾಡಲು ಕ್ರಮ ವಹಿಸಬೇಕು. ದಾಸ್ತಾನುಗಳನ್ನು ಅವಶ್ಯಕತೆಗೆ ತಕ್ಕಂತೆ ಹಾಗೂ ಮಕ್ಕಳ ಸಂಖ್ಯೆಗನುಗುಣವಾಗಿ ದಾಸ್ತಾನುಗಳನ್ನು ಸ್ವಚ್ಚತೆ ಹಾಗೂ ಗುಣಮಟ್ಟದಿಂದ ಇರುವಂತೆ ಪೂರೈಸಬೇಕು. ಗೋದಾಮುಗಳನ್ನು ಪ್ರತಿದಿನ ಸ್ವಚ್ಚತೆ ಮಾಡಬೇಕು ಹಾಗೂ ಗೋದಾಮಿನ ಸುತ್ತ-ಮುತ್ತಲಿನ ಪರಿಸರವನ್ನೂ ಸಹ ಸ್ವಚ್ಛವಾಗಿಟ್ಟುಕೊಳ್ಳುವಂತೆ ಗೋದಾಮುಗಳ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ, ಗೋದಾಮುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರೊಂದಿಗೆ ಸಂವಾದ ನಡೆಸಿ, ಅವರಿಗೆ ಸಮಯಕ್ಕೆ ತಕ್ಕಂತೆ ಕೂಲಿ ಪಾವತಿ, ಹಾಗೂ ಇತರೆ ವಿಷಯಗಳ ಕುರಿತು ಮಾತನಾಡಿ ಕುಂದುಕೊರತೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ದೇವೇಂದ್ರ ನಾಯ್ಕೋಡಿ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎಸ್. ಎಸ್. ಕುಂಬಾರ, ಸಗಟು ಮಳಿಗೆ ವ್ಯವಸ್ಥಾಪಕ ಗುರಪ್ಪ ಕಣಬೂರ ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!