ಪ್ರಜಾಸ್ತ್ರ ಅಪರಾಧ ಸುದ್ದಿ
ಹುಬ್ಬಳ್ಳಿ: ಜ್ಯುವೆಲರಿ ಅಂಗಡಿಯಲ್ಲಿಯ ಕಳ್ಳತನ ಪ್ರಕರಣದ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಮುಂಬೈ ಮೂಲದ ಫರ್ಹಾನ್ ಶೇಖ್ ಬಂಧಿತ ಆರೋಪಿಯಾಗಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಘಟನೆಯಲ್ಲಿ ಪಿಎಸ್ಐ ಕವಿತಾ ಮಾಡಗ್ಯಾಳ ಹಾಗೂ ಪೇದೆ ಮಹೇಶ್ ಗಾಯಗೊಂಡಿದ್ದಾರೆ. ಅವರನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಫರ್ಹಾನ್ ಶೇಖ್ ಅಂತಾರಾಜ್ಯ ಕಳ್ಳನಾಗಿದ್ದಾನೆ. ಇತನ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತೆಲಂಗಾಣನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇವರ ತಂಡ ವಿವಿಧ ರಾಜ್ಯಗಳ ನಗರಗಳಲ್ಲಿ ಕಳ್ಳತನ ನಡೆಸುತ್ತಿತ್ತು. ಇದೇ ರೀತಿ ಹುಬ್ಬಳ್ಳಿಯ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಮಾಡಿತ್ತು. ಗುರುವಾರ ರಾತ್ರಿ ಅರ್ಫಾನ್ ನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದರು.
ಇಂದು ಮುಂಜಾನೆ ಉಳಿದ ಆರೋಪಿಗಳ ಬಂಧನಕ್ಕೆ ಇತನನ್ನು ಕರೆದುಕೊಂಡು ಗಾಮನಗಟ್ಟಿ ಕಡೆ ಹೋಗುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆಗ ಗೋಕುಲ ಠಾಣೆ ಪೊಲೀಸ್ ಕವಿತಾ ಮಾಡಗ್ಯಾಳ ಅವರು ಮೊದಲು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪಿಎಸ್ಐ ಹಾಗೂ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಇವರನ್ನೆಲ್ಲ ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.