ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಎರಡು ಬೈಕ್ ಗಳಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ವಿಲ್ಸನ್ ಗಾರ್ಡನ್ ನ ಕೆ.ಎಚ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಆಂಬ್ಯುಲೆನ್ಸ್ ಚಾಲನೆ ಮಾಡಿದ್ದು ಕಾರಣವೆಂದು ಹೇಳಲಾಗುತ್ತಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಬೈಕ್ ನಲ್ಲಿ ಹೊರಟಿದ್ದ ಇಸ್ಮಾಯಿಲ್ ನಥನ್ ದಬಾಪು(40) ಹಾಗೂ ಪತ್ನಿ ಸಮೀನಾ ಬಾನು(33) ಮೃತ ದುರ್ದೈವಿಗಳು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಸಮಯದಲ್ಲಿಯೇ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ ಸಮೀನಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಬೈಕ್ ನಲ್ಲಿದ್ದ ಮೊಹಮ್ಮದ್ ರಿಯಾನ್(29) ಹಾಗೂ ಮೊಹಮ್ಮದ್ ಸಿದ್ದಿಕ್(32) ಗಾಯಗೊಂಡಿದ್ದಾರೆ. ಸಿದ್ಧಿಕ್ ಐಸಿಯುನಲ್ಲಿದ್ದಾರೆ. ಆಂಬ್ಯುಲೆನ್ಸ್ ಚಾಲಕನ ವಿರುದ್ಧ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




