ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಹಿಂದಿಯ ಧೂಮ್ ಸಿನಿಮಾ ಶೈಲಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮಹಾಂತೇಶ ನಗರದ ನಿವಾಸಿ ಸುರೇಶ ನಾಯಿಕ ಬಂಧಿತ ಕಳ್ಳನಾಗಿದ್ದಾನೆ. ಈತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆಜಿ ಬೆಳ್ಳಿ ಆಭರಣ, 1.25 ಲಕ್ಷ ರೂಪಾಯಿ, ಒಂದು ಥಾರ್ ಜೀಪ್ ಹಾಗೂ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.
ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಎಂಬುವರ ಮನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಳ್ಳತನ ಮಾಡಿದ್ದಾನೆ. ಇದರ ತನಿಖೆಗೆ ಪಿಎಸ್ಐ ಜಾವೀದ್ ಮುಶಾಪುರಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಕಳ್ಳನನ್ನು ಬಂಧಿಸಲಾಗಿದೆ. ಈತನ ಮೇಲೆ ಜಿಲ್ಲೆಯ ವಿವಿಧ ಠಾಣೆಯಲ್ಲಿ 21 ಪ್ರಕರಣಗಳಿವೆ. ಐಷಾರಾಮಿ ಜೀವನ ನಡೆಸಲು ಈತ ಕಳ್ಳತನದ ಹಾದಿ ಹಿಡಿದಿದ್ದ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.




