ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸತತ(Rain) ಮಳೆಯಾಗುತ್ತಿದೆ. ಆಲಮಟ್ಟಿ ಜಲಾಶಯ ಪೂರ್ಣಗೊಳ್ಳುವ ಹಂತ ತಲುಪಿವೆ. ನದಿಪಾತ್ರಕ್ಕೆ ನೀರು ಹರಿಸುವುದರಿಂದ ಮುನ್ನೆಚ್ಚರಿಕೆಯಾಗಿ ಪ್ರವಾಹ(Flood) ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸಜ್ಜಾಗುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ(Meeting) ನಡೆಸಿ, ಜಲಾಶಯದಿಂದ ಹೆಚ್ಚುವರಿ ನೀರು ಹರಿಸುವುದರಿಂದ ಮುನ್ನೆಚ್ಚರಿಕೆಯಾಗಿ ತಹಶೀಲ್ದಾರಗಳು ತಮ್ಮ ವ್ಯಾಪ್ತಿಯಲ್ಲಿ ಅಪಾಯಕ್ಕೊಳಗಾಗುವ ಪ್ರದೇಶವನ್ನು ಗುರುತಿಸಿಕೊಂಡು ಯಾವುದೇ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನ-ಜಾನುವಾರುಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಸೂಕ್ತ ಸ್ಥಳಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಗೆ ಕ್ರಮ ವಹಿಸಬೇಕು.
ಮುದ್ದೇಬಿಹಾಳ, ನಿಡಗುಂದಿ, ಕೋಲಾರ ತಾಲೂಕಿನ ಆಯಾ ತಹಶೀಲ್ದಾರ್‌ಗಳು ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಂಟ್ರೋಲ್ ರೂಂ(Control room) ಸ್ಥಾಪಿಸಿ, ದಿನದ 24 ಗಂಟೆ ನಿಗಾವಹಿಸಬೇಕು. ಕೃಷ್ಣಾ ನದಿತೀರದ ಜನ, ಜಾನುವಾರಗಳ ಸುರಕ್ಷತೆಗೆ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಟಾಸ್ಕ್ ಪೋರ್ಸ್(Task Force) ಸಮಿತಿ ದಿನದ 24 ಗಂಟೆಯೂ ನಿರ್ವಹಣಗೆ ಸಿದ್ದರಾಗಿರುವ ಸ್ಥಿತಿಯಲ್ಲಿರಬೇಕು.
ಡೋಣಿ ನದಿ ಪಾತ್ರದ 23, ಭೀಮಾ ನದಿ(Bhima river) ಪಾತ್ರದ 16, ಕೃಷ್ಣಾ ನದಿ(Krishna river) ಪಾತ್ರದ 9 ಗ್ರಾಮ ಪಂಚಾಯತ್‌ಗಳು ನಿರಂತರ ನೀರಿನ ಮಟ್ಟದ ಮಾಹಿತಿಯನ್ನು ಸಂಗ್ರಹಿಸಬೇಕು. ಗ್ರಾಮ ಪಂಚಾಯತ್, ತಾಲೂಕು ಆಡಳಿತ, ಟಾಸ್ಕ್ ಪೋರ್ಸ್ ಸಭೆ ನಡೆಸಬೇಕು. ಮುನ್ನೆಚರಿಕೆ ಕ್ರಮವಾಗಿ ನದಿ ಪಾತ್ರಕ್ಕೆ ಜನ, ಜಾನುವಾರು ತೆರಳದಂತೆ ಡಂಗೂರ ಸಾರಿ ಜಾಗೃತಿ ಮೂಡಿಸಬೇಕು. ಜನ-ಜಾನುವಾರುಗಳ ಹಾನಿ ಸಂದರ್ಭದಲ್ಲಿ ನಿಯಮಾನುಸಾರ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಡೆಂಗ್ಯೂ ನಿಯಂತ್ರಣ ಸಲುವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಒ ಹಾಗೂ ಸಿಬ್ಬಂದಿಗಳಿಗೆ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ಜಾಗೃತಿ ಮೂಡಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲಕುಮಾರ ಬಾಗಲದೊಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ್ ಮಾನವರ, ತಾಲೂಕಿನ ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳು, ಜಿಪಂ, ತಾಪಂ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.