ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Benagaloru): ಮುಡಾ, ವಾಲ್ಮೀಕಿ ನಿಗಮದ ಪ್ರಕರಣ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್(BJP-JDS) ಜೊತೆಯಾಗಿ ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಶನಿವಾರ ಇದಕ್ಕೆ ಬಿಜೆಪಿ ಮಾಜಿ ಸಿಎಂ(BSY)ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ(HDK) ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಎರಡು ಪಕ್ಷಗಳ ನಾಯಕರು ಕೆಂಗೇರಿ ಹತ್ತಿರದ ಜೆ.ಕೆ ಅರೇನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು.
ಇದಕ್ಕೂ ಮಾತನಾಡಿರುವ ಬಿಎಸ್ವೈ, ಸಿದ್ದರಾಮಯ್ಯನವರಿಗೆ(Siddaramaiah) ಇದು ಕೊನೆಯ ಅವಕಾಶ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರಿಗೂ ಗೌರವ, ಪಕ್ಷಕ್ಕೂ ಗೌರವ ಬರುತ್ತೆ. ಇಲ್ಲದೆ ಹೋದರೆ ರಾಜ್ಯಪಾಲರು ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು. ಅದಕ್ಕೆ ಅವಕಾಶ ಕೊಡದೆ ಅವರೆ ರಾಜೀನಾಮೆ ಕೊಡುವುದು ಒಳ್ಳೆಯದು ಎನ್ನುವ ಸಲಹೆಯನ್ನು ನಾನು ಕೊಡುತ್ತೇನೆ ಎಂದಿದ್ದಾರೆ.
ಪಾದಯಾತ್ರೆ ಬಗ್ಗೆ ಕಾಂಗ್ರೆಸ್ಸಿನವರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಹೇಳಲು ಬಯಸುತ್ತೇನೆ. ಜನ ನಮ್ಮನ್ನು ಆಯ್ಕೆ ಮಾಡಿಕಳಿಸಿರುವುದು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲಿ. ಭ್ರಷ್ಟಾಚಾರಿಗಳನ್ನು ಜೈಲಿಗೆ ಹಾಕಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಸಿದ್ದರಾಮಯ್ಯನವರು 14 ಸೈಟ್ ನುಂಗಿದ ಮೇಲೆ ಅವರ ಬೆಂಬಲಿಗರು 300 ಸೈಟ್ ನುಂಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟ ಸರ್ಕಾರ ತೆಗೆಯುವ ನಿಟ್ಟಿನಲ್ಲಿ ಈ ಪಾದಯಾತ್ರೆ ಬರೀ ಎರಡೂ ಪಕ್ಷಗಳ ಕಾರ್ಯಕರ್ತರು ಮಾತ್ರವಲ್ಲ, ಸಾರ್ವಜನಿಕರು ಭಾಗವಹಿಸಿದ್ದಾರೆ. ನಮ್ಮ ಕಾರ್ಯಕ್ರಮ ತೆಡೆಯಲು ಕಾಂಗ್ರೆಸ್ಸಿನವರು ನಿನ್ನೆ ಬಿಡದಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ನನಗೆ ವೈಯಕ್ತಿಕವಾಗಿ ಮಾಡಿರುವ ಪ್ರಶ್ನೆಗಳಿಗೆ ನಾನು ರಾಮನಗರದಲ್ಲಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ರಾಮನಗರಕ್ಕೆ(Ramanagara) ಬಂದ ಮೇಲೆ ನಮ್ಮ ತಂದೆಯವರು ಏನೆಲ್ಲ ಆಸ್ತಿ ಮಾಡಿದ್ದಾರೆ ಅನ್ನೋದು ಹೇಳಬೇಕು ಎಂದು ಕಾಂಗ್ರೆಸ್ಸಿನ ಅಧ್ಯಕ್ಷರು ಹೇಳಿದ್ದಾರೆ. ನಾನು ಅಲ್ಲೇ ಉತ್ತರ ಕೊಡುತ್ತೇನೆ. ನಮ್ಮನ್ನು ಜೈಲಿಗೆ ಕಳಿಸಲು ನಾನು ಕೇಂದ್ರದ ಮಂತ್ರಿಗಳಿಗೆ ದಾಖಲೆಗಳನ್ನು ಕೊಟ್ಟಿದ್ದೇನೆ ಎಂದು ಅವರೆ ಹೇಳಿದ್ದಾರೆ. ಆ ಮೂಲಕ ಜೈಲಿಗೆ ಹೋಗಲು ಸಿದ್ಧರಾಗಿದ್ದಾರೆ. ಒಂದು ಬ್ಲ್ಯಾಕ್ ಅಂಡ್ ವೈಟ್ ಟಿವಿ, ಡಿವಿಡಿ ಇಟ್ಟುಕೊಂಡು ದೊಡ್ಡಆಲದಹಳ್ಳಿಯಲ್ಲಿದ್ದವರು ಇಂದು 1,400 ಕೋಟಿ ಆಸ್ತಿ ಮಾಡಿದ್ದು ಅದನ್ನು ಇಟ್ಟುಕೊಂಡಾ ಎಂದು ಡಿ.ಕೆ ಶಿವಕುಮಾರಗೆ(DK Shivakumar) ಮರು ಪ್ರಶ್ನಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್, ಜಿ.ಟಿ ದೇವೇಗೌಡ, ಸದಾನಂದಗೌಡ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ಮಹೇಶ್ ಸೇರಿದಂತೆ ಅನೇಕ ನಾಯಕರು ಮಾತನಾಡಿದರು. ಬಿಜೆಪಿ, ಜೆಡಿಎಸ್ ಸಂಸದರು, ಶಾಸಕರು, ನಾಯಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.