ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿಲೋ ಮೀಟರ್ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು 52 ಕೋಟಿ ರೂಪಾಯಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್ ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
43 ಕಿಲೋ ಮೀಟರ್ ದೂರದ ಕೊಲ್ಹಾರದಿಂದ ವಿಜಯಪುರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು 10.8 ಕಿಲೋ ಮೀಟರ್ ಉದ್ದದ ಪಿಎಸ್.ಸಿ ಕೊಳವೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಇದರಿಂದ ನೀರಿನ ಸೋರಿಕೆ ವಿಪರೀತ ಹೆಚ್ಚಾಗಿದೆ. ಇದನ್ನು ಬದಲಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ವಿವಿಧ ಕಾರಣಗಳಿಂದಾಗಿ ಆಗಿರಲಿಲ್ಲ. ಆದರೆ, ಈಗ ಅದಕ್ಕೆ ಅಂತಿಮ ಮುದ್ರೆ ಒತ್ತಿದ್ದು, ಹಣ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅವರು ವಿವರಿಸಿದರು. ಆರಂಭದಲ್ಲಿ ಈ ಕೊಳವೆ ಮಾರ್ಗ ಬದಲಿಸಲು 32 ಕೋಟಿ ವೆಚ್ಚಕ್ಕೆ ಅಂದಾಜು ಮಾಡಲಾಗಿತ್ತು. ಕಾಮಗಾರಿ ವಿಳಂಬವಾದ ಕಾರಣ ಅಂದಾಜು ವೆಚ್ಚ ಹೆಚ್ಚಾಗಿ 52 ಕೋಟಿಗೆ ಏರಿದೆ ಎಂದು ಹೇಳಿದರು.
ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನತೆಗೆ ಸದ್ಯ 55 ಎಲ್‌ಪಿಸಿಡಿ (ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್) ಕುಡಿಯುವ ನೀರು ಪೂರೈಸುತ್ತಿದ್ದು, ಅದನ್ನು 135 ಎಲ್‌ಪಿಸಿಡಿ ಗೆ ಹೆಚ್ಚಿಸುವ ಸಂಬಂಧ ಯೋಜನೆ ರೂಪಿಸಲಾಗುವುದು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜತೆ ಸೇರಿ ಇದನ್ನು ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಈ ಎರಡೂ ಪಟ್ಟಣಗಳಿಗೆ 55 ಎಲ್‌ಪಿಸಿಡಿ ನೀರು ಸರಬರಾಜು ಆಗುತ್ತಿದೆ. ಸದ್ಯ ಈ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿರುವ ಕಾರಣ ಅದನ್ನು 135 ಎಲ್ಪಿಸಿಡಿಗೆ ಹೆಚ್ಚಿಸುತ್ತಿದ್ದು ಅಚ್ಚುಕಟ್ಟಾಗಿ ಯೋಜನೆ ಜಾರಿ ಮಾಡಬೇಕು ಎಂದರು.
ಚಡಚಣ, ಆಲಮೇಲ, ಮುದ್ದೇಬಿಹಾಳ, ನಾಲತವಾಡ, ಸಿಂದಗಿ ಮತ್ತು ತಾಳಿಕೋಟೆಗಳಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಇದರ ಜೊತೆಗೆ ಮುದ್ದೇಬಿಹಾಳ (17.45 ಕೋಟಿ), ಸಿಂದಗಿ (26.53 ಕೋಟಿ) ಬಸವನಬಾಗೇವಾಡಿ (14.58 ಕೋಟಿ) ಪಟ್ಟಣಗಳ ನೀರು ಸರಬರಾಜು ಜಾಲ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ತ್ವರಿತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟಾಜ್ಞೆ ಮಾಡಿದರು.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ಹಣಕಾಸು ಇಲಾಖೆ ಮುಖ್ಯಸ್ಥರಾದ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ನಾಗೇಂದ್ರ ಪ್ರಸಾದ, ಮುಖ್ಯ ಎಂಜಿನಿಯರ್ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮತ್ತು ಜಿಪಂ ಸಿಇಒ ರಿಷಿ ಆನಂದ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಹಾಜರಿದ್ದರು.