ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಅರಿಕೇರಿ ಎಲ್ ಟಿ ನಂಬರ್ 1 ಹತ್ತಿರ ಕಳೆದ ಜನವರಿ 28, 2025ರಂದು ಮುಂಜಾನೆ ಸುಮಾರು 10.30ರ ಸುಮಾರಿಗೆ ಸತೀಶ ಪ್ರೇಮಸಿಂಗ್ ರಾಠೋಡ ಎನ್ನುವ ಯುವಕನನ್ನು ಹತ್ಯೆ ಮಾಡಲಾಗಿರುತ್ತೆ. ಈ ಸಂಬಂಧ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ 5ನೇ ಆರೋಪಿ ಸಾಗರ ರಾಠೋಡ ಎಂಬಾತ ಕಂಟ್ರಿ ಪಿಸ್ತೂಲ್ ಗಳನ್ನು ಅಕ್ರಮವಾಗಿ ಪೂರೈಕೆ ಮಾಡುತ್ತಿರುವುದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಹಲವು ಜನರಿಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿರುವುದು ಕಂಡು ಬಂದಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿ 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯ ಹಂಚಿನಾಳ ತಾಂಡ ನಿವಾಸಿ ಪ್ರಕಾಶ ಮರ್ಕಿ ರಾಠೋಡ ಬಳಿ 1 ಪಿಸ್ತೂಲ್, 3 ಸಜೀವ ಗುಂಡು, ಅರಕೇರಿಯ ಕರಾಡ ದೊಡ್ಡಿ ನಿವಾಸಿ ಅಶೋಕ ಮರಮು ಪಾಂಡ್ರೆ ಬಳಿಯಿದ್ದ 1 ಪಿಸ್ತೂಲ್, 2 ಸಜೀವ ಗುಂಡು, ಕಡಿ ತಾಂಡಾ ನಿವಾಸಿ ಸುಜಿತ ಸುಭಾಸ ರಾಠೋಡ ಬಳಿ 1 ಪಿಸ್ತೂಲ್, 1 ಸಜೀವ ಗುಂಡು, ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಖದೇವ ಅಲಿಯಾಸ್ ಸುಖಿ ನರಸು ರಾಠೋಡ ನಾಗಾವಿ ತಾಂಡದ ನಿವಾಸಿ ಹತ್ತಿರವಿದ್ದ 1 ಪಿಸ್ತೂಲ್, 5 ಸಂಜೀವ ಗುಂಡು, ಸಿಂದಗಿ ಠಾಣೆ ವ್ಯಾಪ್ತಿಯ ನಾಗಾವಿ ತಾಂಡ ನಿವಾಸಿ ಪ್ರಕಾಶ ಭೀಮಸಿಂಗ ರಾಠೋಡ ಹತ್ತಿರವಿದ್ದು 1 ಪಿಸ್ತೂಲ್, 1 ಸಜೀವ ಗುಂಡು, ಬಸವನ ಬಾಗೇವಾಡಿ ಠಾಣೆ ವ್ಯಾಪ್ತಿಯ ಗಣೇಶ ಶಿವರಾಮ ಶೆಟ್ಟಿ ಬಳಿಯಿದ್ದ 1 ಪಿಸ್ತೂಲ್, 4 ಸಜೀವಗುಂಡು, ಆದರ್ಶನಗರ ಠಾಣೆ ವ್ಯಾಪ್ತಿಯ ನೂಲ್ವಿಯ ನಿವಾಸಿ ಚನ್ನಪ್ಪ ಮಲ್ಲಪ್ಪ ನಾಗನೂರನಿಂದ 1 ಪಿಸ್ತೂಲ್, 4 ಸಜೀವ ಗುಂಡು, ತಿಕೋಟಾ ಠಾಣೆ ವ್ಯಾಪ್ತಿಯಲ್ಲಿ ಬರುವ ಲೋಹಗಾಂವ ನಿವಾಸಿ ಸಂತೋಷ ಕಿಶನ್ ರಾಠೋಡನಿಂದ 1 ಪಿಸ್ತೂಲ್, 4 ಸಜೀವ ಗುಂಡು, ಗ್ರಾಮೀಣ ಠಾಣೆ ವ್ಯಾಪ್ತಿಯ ಐತವಾಡೆ ನಿವಾಸಿ ಜನಾರ್ದನ ವಸಂತ ಪವಾರನಿಂದ 1 ಪಿಸ್ತೂಲ್, ಹಂಚನಾಳ ಎಲ್.ಟಿ ನಿವಾಸಿ ಸಾಗರ ಸುರೇಶ ರಾಠೋಡ ಎಂಬಾತನ ಬಳಿಯಿಂದ 1 ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಜನವರಿ 28ರಂದು ಸತೀಶ ಪ್ರೇಮಸಿಂಗ್ ರಾಠೋಡನ ಮೇಲೆ ಗುಂಡು ಹಾರಿಸಿ, ಚಾಕು ಇರಿದು ಕೊಲೆ ಮಾಡಲಾಗಿತ್ತು. ಎ1 ರಮೇಶ ಗೇಮು ಲಮಾಣಿ ಎಂಬಾತನಿಗೆ ಎ5 ಸಾಗರ ಸುರೇಶ ರಾಠೋಡ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ. ಈತನನ್ನು ಫೆಬ್ರವರಿ 13, 2025ರಂದು ಬಂಧಿಸಿ ವಿಚಾರಣೆ ಮಾಡಿದಾಗ ಜಿಲ್ಲೆಯ ವಿವಿಧ ಜನರಿಗೆ ಕಂಟ್ರಿ ಪಿಸ್ತೂಲ್ ಅನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದ. ಅದರಂತೆ ದಾಳಿ ಮಾಡಿ ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.