ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 462 ರನ್ ಗಳಿಗೆ ಆಲೌಟ್ ಆಗಿದೆ. ಸರ್ಫರಾಜ್ ಖಾನ್ ಭರ್ಜರಿ 150 ರನ್ ಬಾರಿಸಿದ. ರಿಷಬ್ ಪಂತ್ 99 ರನ್ ಗೆ ಔಟ್ ಆಗುವ ಮೂಲಕ ಶತಕ ವಂಚಿತನಾಗಿ ತೀವ್ರ ನಿರಾಸೆ ಅನುಭವಿಸಿದ. ಇನ್ನು ಉತ್ತಮ ಆಟವಾಡುತ್ತಿದ್ದ ಟೀಂ ಇಂಡಿಯಾಗೆ ಹೊಸ ಬಾಲ್ ಮುಳುವಾಯ್ತಾ ಎನ್ನುವ ಪ್ರಶ್ನೆ ಮೂಡಿದೆ.
3 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ಮುಂದೆ 62 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಆಲೌಟ್ ಆಯ್ತು. 81ನೇ ಓವರ್ ನಲ್ಲಿ ಟಿಮ್ ಸೌಥಿ ಹೊಸ ಚಂಡಿನೊಂದಿಗೆ ಬೌಲಿಂಗ್ ಶುರು ಮಾಡಿದಾಗ ಬಾಲ್ ಹೆಚ್ಚು ತಿರುವು ಪಡೆಯುತ್ತಿರುವುದು ಕಂಡು ಬಂತು. ಇದರ ಪರಿಣಾಮ ಕೇವಲ 62 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಬಿದ್ದವು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ವಿಲ್ ಓರಕ್ ತಲಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಅಜಾಝ್ ಪಟೇಲ್ 2, ಸೌಥಿ ಹಾಗೂ ಗ್ಲೇಲ್ ಫಿಲ್ಪಸ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ 107 ರನ್ ಗುರಿ ನೀಡಲಾಗಿದ್ದು, ಭಾನುವಾರ ಕೊನೆಯ ದಿನದಾಟ ವರುಣದೇವನ ಮೇಲೆ ನಿಂತಿದೆ.