ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಡಾ.ಸಿಂಪಿ ಲಿಂಗಣ್ಣವರ 121ನೇ ಜನ್ಮ ದಿನಾಚರಣೆಯನ್ನು ಬುಧವಾರ ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಚಾರ್ಯರಾದ ಡಾ.ಎಸ್.ಟಿ.ಬೋಳರಡ್ಡಿ ಅವರು, ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಸಾಹಿತ್ಯದ ವಿಷಯಗಳನ್ನು ಅರಿಯಲು ಅವಕಾಶ ಒದಗಿದೆ ಎಂದರು.
ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ಜಾನಪದ ದಿಗ್ಗಜ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಸಾಹಿತಿಗಳಾದ ಸಿಂಪಿ ಲಿಂಗಣ್ಣ ಅವರು ಅಪರೂಪದ ಸಾಧನೆ ಮಾಡಿದ್ದಾರೆ. ಹಳ್ಳಿಗರ ಮಧ್ಯವಿದ್ದು ಅವರ ಹಾಡುಗಳನ್ನು ಸಂಗ್ರಹಿಸಿ ನಾಡಿಗೆ ಕೀರ್ತಿ ತಂದುಕೊಟ್ಟವರು. ಸಿಂಪಿ ಲಿಂಗಣ್ಣನವರು, ಸಾಹಿತ್ಯದ ಋಷಿಯಾಗಿ ಅರವಿಂದರ ಹಾಗೂ ರಾಮತೀರ್ಥರ ತಾತ್ವಿಕ ಚಿಂತನೆಯನ್ನು ಅನುವಾದದ ಮೂಲಕ ಕನ್ನಡಕ್ಕೆ ತಂದ ಶ್ರೇಯ ಅವರದ್ದಾಗಿದೆ ಎಂದು ಹೇಳಿದರು.
ಶಿವಶರಣಪ್ಪ ಶಿರೂರ (ಯಾಳಗಿ)ಮಾತನಾಡಿ, ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜನಪದ ಸಾಹಿತ್ಯ ಹಲವಾರು ತಿರುವುಗಳನ್ನು ಪಡೆದುಕೊಂಡು ಬೆಳೆಯುತ್ತಿದೆ. ಮೂಲ ಜಾನಪದ ಕಲೆಯನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಮರೆಯದೇ ಉಳಿಸಿ ಬೆಳೆಸಬೇಕು. ನಮ್ಮ ಹಿರಿಯರು ಮನೆ ಕೆಲಸ ಮಾಡುವಾಗ, ಕುಟ್ಟುವಾಗ, ಬೀಸುವಾಗ, ಹಂತಿಪದಗಳು ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ ಎಂದರು. ಬಿ.ಆರ್.ಬನಸೋಡೆ ಮಾತನಾಡಿ ಸಿಂಪಿಲಿಂಗಣ್ಣ ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ಮೆಲುಕು ಹಾಕಿ, ಇವರು ಚಡಚಣದಲ್ಲಿ ನಾಡಹಬ್ಬವನ್ನು ಅದ್ದೂರಿಯಾಗಿ ಎಲ್ಲರನ್ನು ಒಗ್ಗೂಡಿಸಿ ಆಗಿನ ಕಾಲದಲ್ಲಿಯೇ ಆಚರಿಸುತ್ತಿದ್ದರು. ಪ್ರಸ್ತುತ ಅಂತಹ ಆಚರಣೆಗಳು ಕಣ್ಮರೆಯಾಗುತ್ತಿವೆ ಎಂದರು.
ಹಲಸಂಗಿ ಪ್ರತಿಷ್ಠಾನದ ಸದಸ್ಯರಾದ ಡಾ.ವಿ.ಡಿ.ಐಹೊಳ್ಳಿ, ಪುಲಕೇಶಿ ಪುರುಷೋತ್ತಮ ಗಲಗಲಿ, ದಾಕ್ಷಾಯಣಿ ರಮೇಶ ಬಿರಾದಾರ, ಡಾ.ಸಿಂಪಿ ಲಿಂಗಣ್ಣನವರ ಪುತ್ರರಾದ ಆರ್.ಎನ್ ಸಿಂಪಿ, ಅರುಣ ಸಿಂಪಿ, ಶಂಕ್ರಪ್ಪ ಗಿರಿಮಲ್ಲಪ್ಪ ಗಲಗಲಿ, ಸುಭಾಷ ಯಾದವಾಡ, ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.




