ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಟ ನಡೆಸಿದ ಸ್ವಾಮಿ ರಮಾನಂದ ತೀರ್ಥರ 121ನೇ ಜಯಂತಿಯನ್ನು ಪಟ್ಟಣದಲ್ಲಿರುವ ಅವರ ಹೆಸರಿನ ರಾಷ್ಟ್ರೀಯ ಸ್ಮಾರಕ ಭವನದಲ್ಲಿ ಗುರುವಾರ ಸಂಜೆ ಆಚರಿಸಲಾಯಿತು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸೇರಿದಂತೆ ಇತರರು ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 2006ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ವಿದ್ಯಾರ್ಥಿನಿಯರ ವಸತಿ ನಿಲಯ ಸೇರಿ ಬೇರೆ ಬೇರೆ ಕಾರ್ಯಕ್ಕೆ ಉಪಯೋಗವಾಗಿ ಮುಂದೆ ನಿಂತು ಹೋಯಿತು. ಇದನ್ನು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಹಾಗೂ ಸಮಾಜಮುಖಿ ಚಟುವಟಿಕೆ ನಡೆಸಲು ಬೇಕಾದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಸ್ವಾಮಿ ರಮಾನಂದ ತೀರ್ಥರು ಈ ನಾಡಿಗೆ ನೀಡದ ಕೊಡುಗೆಯನ್ನು ಸ್ಮರಿಸುವ ಕೆಲಸ ಇಲ್ಲಿ ನಿತ್ಯ ನಡೆಯುವಂತೆಯಾಗಬೇಕು. ಅದಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ನಮ್ಮ ತಾಲೂಕಾಡಳಿತ ಕಚೇರಿಯಿಂದ ನೀಡಲಾಗುವುದು ಎಂದರು. ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸಿಂದಗಿಯವರಾದ ಸ್ವಾಮಿ ರಮಾನಂದ ತೀರ್ಥರು, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಕಾರಣಿಕರ್ತರು. ದಿವಂಗತ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಕಲಬುರಗಿಯಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆಯಲ್ಲಿ ರಮಾನಂದ ತೀರ್ಥರ ಸಂಪರ್ಕದಲ್ಲಿದ್ದರು. ಅವರ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ. ಇಂತಹ ಸಾಧಕರ ಹೆಸರಿನಲ್ಲಿರುವ ಸ್ಮಾರಕ ಭವನನ್ನು ಇಷ್ಟು ವರ್ಷ ಪಾಳುಬಿದ್ದಿತ್ತು. ಅದಕ್ಕೆ ಇದೀಗ ಮತ್ತೆ ಮರುಜೀವ ತುಂಬುವ ಕೆಲಸ ನಡೆದಿದೆ ಎಂದರು.
ಜೆಡಿಎಸ್ ಮುಖಂಡ ಪ್ರಕಾಶ ಹಿರೇಕುರುಬರ ಮಾತನಾಡಿದರು. ಪ್ರಸ್ತಾವಿಕವಾಗಿ ಪ್ರದೀಪ ದೇಶಪಾಂಡೆ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಶ್ರೀಶೈಲ ನಂದಿಕೋಲ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ವೇದಿಕೆ ಮೇಲೆ ಉಪಸ್ಥಿರಿದ್ದರು. ಶಿರಸ್ತೇದಾರ್ ರಾಘವೇಂದ್ರ ಜೋಶಿ, ಕಂದಾಯ ನಿರೀಕ್ಷಕರಾದ ಐ.ಎ ಮಕಾಂದರ, ಸೋಮನಾಯಕ, ಸಂತೋಷ ವಾಲೀಕಾರ, ಮಾಜಿ ಸೈನಿಕರಾದ ಪುರುಷೋತ್ತಮ ಕುಲಕರ್ಣಿ, ರಾಮು ಜೋಶಿ, ಲಕ್ಷ್ಮಣರಾವ್ ಕುಲಕರ್ಣಿ, ಅಶೋಕ ಜೋಶಿ, ಗೌಡಪ್ಪ ಬಿರಾದಾರ, ಮಾಳಪ್ಪ ಹಿರೇಕುರಬರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶ್ರೀಹರಿ ಕುಲಕರ್ಣಿ ನಿರೂಪಣೆ, ಮಹಾಂತೇಶ ಹಿರೇಮಠ ಸ್ವಾಗತ, ಶಿವಕುಮಾರ ಶಿವಸಿಂಪಗೇರ ವಂದನಾರ್ಪಣೆ ಮಾಡಿದರು.