ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಕ್ಫ್ ಆಸ್ತಿ ಕಬಳಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಡಿ ಮೌನವಾಗಿರಲು 150 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಆರೋಪ ಹೊತ್ತಿರುವ ಬಿಜೆಪಿ ಶಾಸಕ ವಿಜಯೇಂದ್ರ ಸೋಮವಾರ ಸುವರ್ಣಸೌದದಲ್ಲಿ ಮಾತನಾಡಿ, 150 ಕೋಟಿ ರೂಪಾಯಿ ಆಮಿಷದ ಕುರಿತು ಸಿಬಿಐ ತನಿಖೆಗೆ ವಹಿಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಕ್ಫ್ ಆಸ್ತಿ ಬಗ್ಗೆ ಮಾಣಿಪ್ಪಡಿ ವರದಿ ನೀಡಿದ್ದರು. ಉಪ ಲೋಕಾಯುಕ್ತ ನ್ಯಾ.ಆನಂದ್ ಅವರು ವರದಿ ನೀಡಿದ್ದರು. 2016ರಲ್ಲಿ ವಕ್ಫ್ ಆಸ್ತಿ ಕಬಳಿಕೆ ವರದಿ ನೀಡಲಾಗಿತ್ತು. ಆದರೆ, ಅಂದಿನ ಸಿಎಂ ಉಪ ಲೋಲಾಯುಕ್ತರ ವರದಿಯನ್ನು ಮುಚ್ಚಿ ಹಾಕಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಸವಾಲು ಹಾಕುತ್ತೇನೆ. ಆರೋಪದ ಬಗ್ಗೆ ಸಿಬಿಐ ತನಿಖೆಯಾಗಲಿ. ಮಾಣಿಪ್ಪಡಿ ವರದಿ ಬಗ್ಗೆಯೂ ಸಿಬಿಐ ತನಿಖೆಯಾಗಲಿ. ಹಗರಣಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ಹಿಟ್ ಅಂಡ್ ರನ್ ಮಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು. ವಕ್ಫ್ ಆಸ್ತಿ ಕಬಳಿಕ ಬಗ್ಗೆ ಅನ್ವರ್ ಮಾಣಿಪ್ಪಡಿ ಮೌನವಾಗಿರಲು ವಿಜಯೇಂದ್ರ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 150 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು. ಈ ಬಗ್ಗೆ ಅವರು ಪ್ರಧಾನಿ ಮೋದಿಗೆ ದೂರು ಸಲ್ಲಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಅಂದು ವಿಜಯೇಂದ್ರ ನನಗೆ ಗೊತ್ತಿರಲಿಲ್ಲ. ಕಾಂಗ್ರೆಸ್ ನ ಕೆಲವರು ಆಮಿಷ ಒಡ್ಡಿದ್ದರು ಎಂದು ಮಾಣಿಪ್ಪಡಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.