ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನಸಭೆ ಕಲಾಪದ ವೇಳೆ ಗಲಾಟೆ ಮಾಡಿ ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿದ ಸಂಬಂಧ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಶುಕ್ರವಾರ ಸಭಾಧ್ಯಕ್ಷ ಯು.ಟಿ ಖಾದರ್ ಆದೇಶ ಹೊರಡಿಸಿದ್ದು, ಮುಂದಿನ 6 ತಿಂಗಳ ಕಾಲ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲವೆಂದು ಆದೇಶಿಸಿ ಅಮಾನತು ಮಾಡಲಾಗಿದೆ. ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಆಗ್ರಹಿಸಿದರು. ಕಲಾಪಕ್ಕೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರು ಹೇಳಿದರೂ ಕೇಳಲಿಲ್ಲ. ಹೀಗಾಗಿ ಅಮಾನತುಗೊಳಿಸಿದ್ದು, ಮಾರ್ಷಲ್ ಗಳು ಎತ್ತಿಕೊಂಡು ಹೊರಗೆ ಹೋದರು.
ದೊಡ್ಡನಗೌಡ, ಸಿ.ಎನ್ ಅಶ್ವತ್ಥನಾರಾಯಣ, ಎಸ್.ಆರ್ ವಿಶ್ವನಾಥ, ಬಿ.ಎ ಬಸವರಾಜ, ಎಂ.ಆರ್ ಪಾಟೀಲ, ಚನ್ನಬಸಪ್ಪ, ಬಿ.ಸುರೇಶಗೌಡ, ಉಮಾನಾಥ ಎ.ಕೋಟ್ಯಾನ, ಶರಣು ಸಲಗಾರ, ಸಿ.ಕೆ ರಾಮಮೂರ್ತಿ, ಬಿ.ಬಿ ಹರೀಶ, ಮುನಿರತ್ನ, ಡಾ.ವೈ ಭರತ ಶೆಟ್ಟಿ, ಬಸವರಾಜ ಮತ್ತಿಮೂಡ, ಡಾ.ಚಂದ್ರು ಲಮಾಣಿ, ಡಾ.ಶೈಲೇಂದ್ರ ಬೆಲ್ದಾಳೆ, ಯಶಪಾಲ ಎ.ಸುವರ್ಣ, ಧೀರಜ ಮುನಿರಾಜು ಈ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ.
ಇದನ್ನು ಬಿಜೆಪಿ ಖಂಡಿಸಿದ್ದು ತುಘಲಕ್ ಸರ್ಕಾರವೆಂದು ಕಿಡಿ ಕಾರಿದೆ. ಈ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಹಾಗಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರೂ ಕಾಂಗ್ರೆಸ್ ಸರ್ಕಾರಿ ತುಷ್ಟೀಕರಣಕ್ಕಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ. 40ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಇಷ್ಟೆಲ್ಲಾ ಅನಾಚಾರಗಳನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದ್ದರೂ ಬಿಜೆಪಿ ಸುಮ್ಮನೆ ಕಣ್ಣು ಮುಚ್ಚಿ ಕೂರುವುದಿಲ್ಲ. ಸಿಬಿಐಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದ 18 ಶಾಸಕರನ್ನು 6 ತಿಂಗಳ ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಟಿಪ್ಪು ಸರ್ವಾಧಿಕಾರವನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಕೂಡಲೇ ಈ ಆದೇಶ ವಾಪಸ್ ಪಡೆಯದೆ ಹೋದರೆ ನಿರಂತರ ಹೋರಾಟ ಎದುರಿಸಲು ಸರ್ಕಾರ ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಲಾಗಿದೆ.