ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದ ಕಾಲ್ತುಳಿತ(Stampede) ಪ್ರಕರಣದಲ್ಲಿ 18 ಜನರು ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಿದ್ದಾರೆ. ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಲಾಗಿದೆ. ಕೆಲವರು ಗುರುತುಪತ್ತೆ ಹಚ್ಚುವ ಕೆಲಸ ನಡೆದಿದೆ. ಪ್ರಯಾಗ್ ರಾಜ್ ಗೆ(Prayagraj) ತೆರಳಬೇಕಿದ್ದ ಫ್ಲಾಟ್ ಫಾರ್ಮ್ 14 ಹಾಗೂ 15ರ ರೈಲು ರದ್ದುಗೊಳಿಸಿದ್ದರಿಂದ ಏಕಾಏಕಿ ನೂಕುನುಗ್ಗಲಾಗಿ ಈ ದುರಂತ ನಡೆದಿದೆ. ಮೃತಪಟ್ಟ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಗೊಂಡವರಿಗೆ 1 ಲಕ್ಷ ಪರಿಹಾರ ಘೋಷಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ಹೇಳಿದ್ದಾರೆ. ಇವತ್ತಿನಿಂದಲೇ ತನಿಖೆ ಕೆಲಸ ನಡೆಸಿ. ರೈಲು ನಿಲ್ದಾಣದಲ್ಲಿ ಇರುವ ಸಿಸಿಟಿವಿ ದೃಶ್ಯಗಳನ್ನು ಸುರಕ್ಷಿತವಾಗಿ ಇಡಬೇಕು ಎಂದು ತಿಳಿಸಿಕೊಡಲಾಗಿದೆ. ಇದೀಗ ವಿಶೇಷ ರೈಲುಗಳ ಮೂಲಕ ಪ್ರಯಾಣಿಕರನ್ನು ಕಳಿಸಿಕೊಡಲಾಗಿದೆ.