ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗುಮ್ಮಟನಗರಿ ವಿಜಯಪುರದಲ್ಲಿ ಮಂಗಳವಾರ ಮುಂಜಾನೆ 2.9 ತೀವ್ರತೆಯ ಲಘು ಭೂಕಂಪನವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಇದನ್ನು ಖಚಿತ ಪಡಿಸಿದೆ. ಕಳೆದ 15 ದಿನಗಳಲ್ಲಿ ಏಳೆಂಟು ಬಾರಿ ಭೂಮಿ ಕಂಪಿಸಿದ ಹಾಗೂ ಭಾರೀ ಶಬ್ಧ ಕೇಳುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಭೂತನಾಳ ತಾಂಡ ಭೂಕಂಪನದ ಕೇಂದ್ರ ಬಿಂದುವಾಗಿದೆ. ಐದು ಕಿಲೋ ಮೀಟರ್ ಆಳದಲ್ಲಿ ಭೂಮಿ ತೀವ್ರವಾಗಿ ಕಂಪಿಸಿದೆ ಹಾಗೂ ಭಾರೀ ಶಬ್ಧ ಕೇಳಿ ಬಂದಿದೆ. ಲಘು ಭೂಕಂಪನದಿಂದ ಯಾವುದೇ ಹಾನಿಯಾಗಿಲ್ಲ. ಜನರು ಭಯ ಪಡಬೇಡಿ ಎಂದು ಜಿಲ್ಲಾಡಳಿತ ತಿಳಿಸಿದೆ. ಇತ್ತೀಚೆಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಭೂಕಂಪನದ ಸದ್ದು ಜೋರಾಗಿದೆ. ಸಿಂದಗಿ ತಾಲೂಕಿನಲ್ಲಿ ಸಾಕಷ್ಟು ಬಾರಿ ಈ ಅನುಭವ ಆಗಿದ್ದು, ಜನರ ನಿದ್ದೆಕೆಡಿಸಿತ್ತು.



		
		
		
 
 