ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಉದ್ಯಮಿಯೊಬ್ಬರಿಗೂ ಬೆದರಿಸಿ 2 ಕೋಟಿ ರೂಪಾಯಿ ದರೋಡೆ ಮಾಡಿದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 25ರಂದು ನಡೆದಿದೆ. ಕೆಂಗೇರಿ ನ್ಯೂಟನ್ ನಿವಾಸಿ, ಉದ್ಯಮಿ ಶ್ರೀಹರ್ಷ ಎಂಬುವರಿಗೆ ಸೇರಿದ ಬರೋಬ್ಬರಿ 2 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನಲೆ ಏನು?: ಕೋಲ್ಡ್ ಪ್ರೇಸೀಸ್ ಆಯಿಲ್ ಉದ್ಯಮಿ ನಡೆಸುವ ಸಲುವಾಗಿ ಶ್ರೀಹರ್ಷ ತನ್ನ ಬಳಿಯಿದ್ದ ಹಣ ಹಾಗೂ ಸ್ನೇಹಿತರ ಬಳಿ ಸಾಲು ಮಾಡಿ 2 ಕೋಟಿ ರೂಪಾಯಿ ಹೊಂದಿಸಿದ್ದಾರೆ. ಉದ್ಯಮಕ್ಕೆ ಬೇಕಾದ ಯಂತ್ರಗಳು ಜರ್ಮನ್ ನಲ್ಲಿ ಸಿಗುತ್ತವೆ. ಹೀಗಾಗಿ ಭಾರತೀಯ ರೂಪಾಯಿಯನ್ನು ಯುಎಸ್ ಡಿಟಿ ಕರೆನ್ಸಿಗೆ ಪರಿವರ್ತಿಸಲು ಸ್ನೇಹಿತರಾದ ರಕ್ಷಿತ್, ಪ್ರಕಾಶ್ ಅಗರವಾಲ್ ಗೆ ಹೇಳಿದ್ದಾರೆ. ಇವರು ನಾರಾಯಣ್ ಭರತ್ ಎಂಬುವರ ಪರಿಚಯ ಮಾಡಿಕೊಟ್ಟಿದ್ದಾರೆ. ಇವನು ಬೆಂಜಮಿನ್ ಹರ್ಷ ಅವರ ಪರಿಚಯ ಮಾಡಿ ಇವರಿಂದ ಕೆಲಸ ಆಗುತ್ತೆ ಎಂದಿದ್ದಾರೆ.
ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರಲು ಹೇಳಿದ್ದಾರೆ. ಹೀಗಾಗಿ ಶ್ರೀಹರ್ಷ ಸ್ನೇಹಿತರಾದ ನಾಗೇಂದ್ರ, ಶಾಂತಕುಮಾರ್ ಅವರೊಂದಿಗೆ ಕಾರಿನಲ್ಲಿ ಹೋಗಿದ್ದಾರೆ. ಬೆಂಜಮಿನ್ ಹರ್ಷ ಅವರನ್ನು ಎಕೆ ಎಂಟರ್ ಪ್ರೈಸಸ್ ಮಳಿಗೆಗೆ ಕರೆದುಕೊಂಡು ಹೋಗಿ ಹಣ ಎಣಿಸುವ ಯಂತ್ರದ ಸಹಾಯದಿಂದ ಎಣಿಕೆ ಶುರು ಮಾಡಿದ್ದಾರೆ. ಸಂಜೆ ಸುಮಾರು 4.30ಕ್ಕೆ ಆರೇಳು ಜನರ ಗುಂಪು ಇವರಿದ್ದ ಮಳಗೆಗೆ ಬಂದು ಚಾಕುವಿನಿಂದ ಬೆದರಿಕೆ ಹಾಕಿ ಹಲ್ಲೆ ಮಾಡಿ 2 ಕೋಟಿ ರೂಪಾಯಿ ಕಿತ್ತುಕೊಂಡು ಹೋಗಿದ್ದಾರೆ. ನಂತರ ಶೆಟರ್ ತೆಗೆದು ಇವರು ಹೊರಗೆ ಬಂದಿದ್ದಾರೆ. ಆದರೆ, ಬೆಂಜಮಿನ್ ಹರ್ಷ ಹಾಗೂ ಆತನೊಂದಿಗೆ ಇದ್ದ ಇನ್ನಿಬ್ಬರು ಸ್ಥಳದಿಂದ ಓಡಿ ಹೋಗಿದ್ದಾರೆ. ಹಣ ಕಳೆದುಕೊಂಡ ಹರ್ಷ ಪೊಲೀಸರಿಗೆ ದೂರು ನೀಡಿದ್ದಾರೆ.