Ad imageAd image

ಒಂದೇ ತಾಲೂಕಿನಲ್ಲಿ 2 ಮಿನಿ ವಿಧಾನಸೌಧ ರಾಜ್ಯದಲ್ಲೇ ಪ್ರಥಮ: ಎಂ.ಬಿ ಪಾಟೀಲ

ವಿವಿಧ ಸಭೆ ಸಮಾರಂಭಗಳಲ್ಲಿ ಅನಗತ್ಯ ಹಾರ, ತುರಾಯಿ ಖರ್ಚು ಮಾಡದೇ ಬದಲಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನೋಟ್‌ಬುಕ್ ವಿತರಣೆ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು

Nagesh Talawar
ಒಂದೇ ತಾಲೂಕಿನಲ್ಲಿ 2 ಮಿನಿ ವಿಧಾನಸೌಧ ರಾಜ್ಯದಲ್ಲೇ ಪ್ರಥಮ: ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ವಿವಿಧ ಸಭೆ ಸಮಾರಂಭಗಳಲ್ಲಿ ಅನಗತ್ಯ ಹಾರ, ತುರಾಯಿ ಖರ್ಚು ಮಾಡದೇ ಬದಲಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನೋಟ್‌ಬುಕ್ ವಿತರಣೆ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ(MB Patil) ಅಭಿಪ್ರಾಯಿಸಿದರು.  ಜಿಲ್ಲೆಯ ತಿಕೋಟಾದಲ್ಲಿ ತಾಲೂಕಾ ಸೌಧದಲ್ಲಿನ ಉಪನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ, ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ತಿಕೋಟಾ ಭಾಗದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಸ್ಥಾಪನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ರೈತರು ತಮ್ಮ ಹೊಲದಲ್ಲಿನ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಿ ದುರಸ್ತಿ ಮಾಡಿಕೊಳ್ಳುವುದರಿಂದ ಅನಾವಶ್ಯಕವಾಗಿ ಸಮಯ ವ್ಯರ್ಥವಾಗುತ್ತಿತ್ತು. ಈ ಭಾಗದಲ್ಲಿ ದುರಸ್ತಿ ಕೇಂದ್ರ ಆರಂಭವಾಗಿರುವುದರಿಂದ ರೈತರ ಸಮಯವೂ ಉಳಿತಾಯವಾಗಿ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆತು ರೈತರಿಗೆ ಅನುಕೂಲವಾಗಲಿದೆ.

ಈಗಾಗಲೇ ನೀರಾವರಿಗೆ ಆದ್ಯತೆ ನೀಡಲಾಗಿದೆ. ನೀರಾವರಿಗೆ ನೀಡಿದ ಆದ್ಯತೆಯನ್ನು ಈ ಭಾಗದಲ್ಲಿ ವಿದ್ಯತ್ ಪೂರೈಕೆಗೆ ನೀಡಲಾಗುತ್ತಿದೆ. ವಿದ್ಯುತ್ ಪೂರೈಕೆ ಮುಖ್ಯವಾಗಿರುವುದರಿಂದ ವಿಶೇಷ ಕಾಳಜಿ ವಹಿಸಿ, ನೀರಿನೊಂದಿಗೆ ವಿದ್ಯುತ್ ಒದಗಿಸುವ ಮೂಲಕ ರೈತರ ಬಾಳು ಹಸನಾಗಿಸಲು ಪ್ರಯತ್ನಿಸಲಾಗಿದೆ. 2013-2018ರ ಅವಧಿಯಲ್ಲಿ ನೀರಾವರಿಗಾಗಿ 3,600 ಕೋಟಿ ರೂಪಾಯಿ ವೆಚ್ಚ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿಯನ್ನರಿತು ರೈತರು ಸಾರ್ವಜನಿಕರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ತಿಕೋಟಾ ಮತ್ತು ಬಬಲೇಶ್ವರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಮಿನಿ ವಿಧಾನಸೌಧ ನಿರ್ಮಾಣ ಮಾಡಿರುವ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲಿಯೇ ತಾಲೂಕಾ ಮಟ್ಟದಲ್ಲಿ ಪ್ರಪ್ರಥಮವಾಗಿ ಉಪನೋಂದಣಾಧಿಕಾರಿಗಳ(sub registrar) ಕಚೇರಿ ಕಾರ್ಯಾರಂಭಗೊಳಿಸಿದ್ದು, ಇದರಿಂದ ರೈತರ, ಆಸ್ತಿ ಖರೀದಿ, ಆಸ್ತಿ ನೋಂದಣಿಗೆ ಅನುಕೂಲವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ ರೈತರ ವಿವಿಧ ಕೆಲಸ ಕಾರ್ಯಗಳು ತಾಲೂಕಾ ಕೇಂದ್ರದಲ್ಲಿಯೇ ಆಗುವುದರಿಂದ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಭೂದಾಖಲೆಗಳ ಕಚೇರಿಗಳನ್ನು ಸಹ ಕಾರ್ಯಾರಂಭ ಮಾಡಿ ಅನುಕೂಲ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಿಕೋಟಾ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಜಿಲ್ಲಾ ನೋಂದಣಾಧಿಕಾರಿ ದ್ರಾಕ್ಷಾಯಿಣಿ ಮಠ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ, ತಿಕೋಟಾ ಉಪನೋಂದಣಾಧಿಕಾರಿ ಸುಷ್ಮಾ ಬಡಿಗೇರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ ದೇಶಮುಖ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article