ಪ್ರಜಾಸ್ತ್ರ ಸುದ್ದಿ
ಲಖ್ನೋ(Lucknow): ರಜೆಯ ಮೇಲೆ ಬದ್ದು ಕರ್ತವ್ಯ ಹಾಜರಾಗಲು ತೆರಳುತ್ತಿದ್ದ ಯೋಧನ ಮೇಲೆ ಟೋಲ್ ಪ್ಲಾಜಾ ಸಿಬ್ಬಂದಿ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭುನಿಯಲ್ಲಿ ನಡೆದಿದೆ. ಯೋಧ ಕಪಿಲ್ ಎಂಬುವರ ಮೇಲೆ ಭಾನುವಾರ ರಾತ್ರಿ ಗಂಭೀರವಾಗಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕಂಪನಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿ, ಭವಿಷ್ಯದಲ್ಲಿ ಟೋಲ್ ಪ್ಲಾಜಾ ಹರಾಜಿನಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.
ಶ್ರೀನಗರದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯೋಧ ಕಪಿಲ್ ಹೊರಟಿದ್ದರು. ಟೋಲ್ ಬಳಿ ಸಾಕಷ್ಟು ಸರತಿ ಸಾಲು ಇದೆ. ಜೊತೆಗೆ ತಮಗೆ ಶುಲ್ಕ ರಹಿತವಾಗಿ ಸಂಚರಿಸಲು ಪರವಾನಿಗೆ ಇದೆ ಎಂದು ಐಡಿ ಕಾರ್ಡ್ ತೋರಿಸಿದ್ದಾರೆ. ಆದರೂ ಕೇಳದೆ ಅವರೊಂದಿಗೆ ವಾಗ್ವಾದ ಮಾಡಿ ಹಲ್ಲೆ ಮಾಡಿದ್ದಾರೆ. ಸುಮಾರು 8 ರಿಂದ 10 ಜನರು ಕೂಡಿ ಗಂಭೀರವಾಗಿ ಥಳಿಸಿದ್ದಾರೆ. ಈ ವೇಳೆ ಯೋಧನ ತಂದೆ, ಅವರ ಸಿಬ್ಬಂದಿ ಜೊತೆಯಲ್ಲಿದ್ದರು.
ಈ ಬಗ್ಗೆ ತಿಳಿದ ಗ್ರಾಮಸ್ಥರು ಟೋಲ್ ಪ್ಲಾಜಾವನ್ನು ಧ್ವಂಸ ಮಾಡಿದ್ದಾರೆ. ಯೋಧನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜನರು ಟೋಲ್ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಯೋಧನ ಮೇಲೆ ರೀತಿ ಅಮಾನುಷವಾಗಿ ಹಲ್ಲೆ ಮಾಡಿದವರಿಗೆ ತಕ್ಕ ಪಾಠ ಕಲಿಸಿ ಎಂದಿದ್ದಾರೆ. ಯೋಧ ಕಪಿಲ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸರೂರ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 6 ಜನರನ್ನು ಬಂಧಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆದಿದೆ.