ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕೇಂದ್ರದ ಬಜೆಟ್ ನಲ್ಲಿ(Budget) ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಋಣ ತೀರಿಸಬೇಕಲ್ಲವಾ? ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದರಿಂದ ನೀತಿ ಆಯೋಗದ ಸಭೆಗೆ ನಾನು ಹೋಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಕೆಆರ್ ಎಸ್(KRS) ಗೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 15ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ನಾವು ಹಲವು ಬೇಡಿಕೆಗಳ ಮನವಿ ಸಲ್ಲಿಸಿದ್ದೇವು. ಅದ್ಯಾವುದಕ್ಕೂ ಕೊಟ್ಟಿಲ್ಲ. ಕರ್ನಾಟಕದ ಹೆಸರನ್ನೇ ಪ್ರಸ್ತಾಪ ಮಾಡಿಲ್ಲ. ಆಂಧ್ರ, ಬಿಹಾರಕ್ಕೆ ಕೊಟ್ಟಿರುವುದೆಷ್ಟು, ಕರ್ನಾಟಕಕ್ಕೆ ಕೊಟ್ಟಿರುವುದು ಎಷ್ಟೆಂದು ಸಚಿವರು ಹೇಳಲಿ. ಕುಮಾರಸ್ವಾಮಿ(HDK) ಪ್ರತಿನಿಧಿಸುವ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ? ರಾಯಚೂರಿಗೆ ಏಮ್ಸ್ ಕೇಳಿದ್ದೇವು, ಅದು ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಡಾ(MUDA) ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ಆದರೂ ಆರೋಪ ಮಾಡಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದಾರೆ. 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಅಕ್ರಮ ಮಾಡಿಲ್ಲ. 40 ವರ್ಷದ ಹಿಂದೆ ಕುಮಾರಸ್ವಾಮಿ ಮುಡಾದಲ್ಲಿ ಸೈಟ್ ಪಡೆದಿದ್ದಾರೆ. ಸ್ವಾಧೀನ ಪತ್ರ ಸಹ ಪಡೆದಿದ್ದಾರೆ. ಈಗ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೇವೆ. ನಾನು ಬಂದ ಮೇಲೆ ಏಳೆಂಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ.
ಬಿಜೆಪಿ ಸರ್ಕಾರದ ಕಾಲದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅದಕ್ಕಾಗಿಯೇ 21 ಹಗರಣಗಳನ್ನು ಪಟ್ಟಿ ಮಾಡಿ ಹೇಳಿದ್ದೇನೆ. ಕೆಲವು ತನಿಖೆಗಳು ನಡೆಯುತ್ತಿವೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಇಂದಿನವರೆಗೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ. ಅವರ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ಕೊಟ್ಟಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 7-8 ಹಗರಣಗಳನ್ನು ಸಿಬಿಐ ಗೆ ವಹಿಸಲಾಗಿದೆ. ಇದೆ ಬಿಜೆಪಿ ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಯನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐ ಗೆ ಮೇಲೆ ಇವರಿಗೇನು ಪ್ರೀತಿ ಎಂದು ಪ್ರಶ್ನಿಸಿದರು.