ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎಂದು ಸೌಜನ್ಯಪರ ಹೋರಾಟದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸದನದಲ್ಲಿಯೂ ತೀವ್ರ ಚರ್ಚೆಯಾಗಿದೆ. ಈಗ ತಿಮರೋಡಿ ವಿರುದ್ಧ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ್ ಬಂಧನಕ್ಕೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ತಿಮರೋಡಿ ವಿರುದ್ಧ ಹತ್ತಾರು ಪ್ರಕರಣಗಳಿವೆ. ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮಂಗಳೂರು ಪೊಲೀಸ್ ಆಯುಕ್ತರಿಗೆ ಸಂಪರ್ಕಿಸಿ ತಿಮರೋಡಿ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರಂತೆ. ಸದನದಲ್ಲಂತೂ ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಆ ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡುವುದು ಬೇಡ. ಇಂತಹ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ. ಇಂತಹ ವ್ಯಕ್ತಿಗಳನ್ನು ಹೇಗೆ ನಿರ್ವಹಿಸಬೇಕು ಎಂದು ನಮಗೂ ತಿಳಿದಿದೆ ಎಂದಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಸಿದ್ದರಾಮಯ್ಯ 24 ಜನರನ್ನು ಕೊಲೆ ಮಾಡಿದ್ದಾರೆ. ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ ಅನ್ನೋ ವಿಡಿಯೋ ವೈರಲ್ ಆಗಿದೆ. ಇದು ಮೇ 24, 2023ರಂದು ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಮಾತನಾಡುತ್ತಾ, ಸತ್ಯಣ್ಣ, 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಮತ ಕೇಳಿದ್ದೀರಲ್ಲಾ? ಬಜರಂಗದಳ ಬ್ಯಾನ್ ಮಾಡುತ್ತೇವೆ ಕಾಂಗ್ರೆಸ್ ಗೆ ನೀವು ಮತ ಕೇಳಿದ್ದೀರಲ್ಲ. ಇಂದು ಬೆಳ್ತಂಗಡಿ ಜನ ಸತ್ಯಣ್ಣ ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಕೇಳಿದ್ದಾರೆ ಅನ್ನೋದು ಅಸಲಿ ವಿಡಿಯೋ ಅಂತಾನೂ ಹೇಳಲಾಗುತ್ತಿದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದರ ತನಿಖೆಯಾಗಬೇಕಿದೆ.