ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಅಪ್ಪು ತೆರೆಗೆ ಬಂದು 24 ವರ್ಷಗಳು ಕಳೆದಿವೆ. ಪವರ್ ಸ್ಟಾರ್ 50ನೇ ವರ್ಷದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಮಾರ್ಚ್ 14ರಂದು ಸಿನಿಮಾ ಮರು ಬಿಡುಗಡೆ ಮಾಡಲಾಗಿದೆ. ಪಿಆರ್ ಕೆ ಪ್ರೊಡಕ್ಷನ್ ರೀ ರಿಲೀಸ್ ಮಾಡಿದೆ. 2002ರಲ್ಲಿ ಈ ಸಿನಿಮಾ ತೆರೆ ಕಂಡು ಶತದಿನೋತ್ಸವ ಆಚರಿಸಿತು. ಅಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸಿ ಪುನೀತ್ ಬಗ್ಗೆ ಹಾಡಿ ಹೊಗಳಿದ್ದರು. ನಟಿ ರಕ್ಷಿತಾ ಸಹ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿನಿಮಾ ಅತ್ಯಂತ ಯಶಸ್ಸನ್ನು ಗಳಿಸಿತು. ತಮಿಳು ನಿರ್ದೇಶಕ ಪುರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಸಹ ಮಾಡಿದರು.
ಈ ಕುರಿತು ನಟಿ ರಕ್ಷತಾ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ತಂದೆ, ತಾಯಿ ಸಹ ವಜ್ರೇಶ್ವರಿ ಕಂಬೈನ್ಸ್ ಮೂಲಕ ವೃತ್ತಿ ಆರಂಭಿಸಿದ್ದರು. ನಾನು ಸಹ ಅಲ್ಲಿಂದಲೇ ಚಿತ್ರರಂಗಕ್ಕೆ ಬಂದಿದೆ. ಪಾರ್ವತಮ್ಮ ರಾಜಕುಮಾರ್ ನನಗೆ ಯಾವಾಗಲೂ ಸ್ಪೂರ್ತಿ. ಕನ್ನಡದಲ್ಲಿ ಪುನೀತ್ ಅವರಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುವ ಹೀರೋ ಮತ್ತೊಬ್ಬರಿಲ್ಲ ಎಂದಿದ್ದಾರೆ.
ಅಕ್ಟೋಬರ್ 29, 2021ರಂದು 46ನೇ ವಯಸ್ಸಿನಲ್ಲಿ ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಇಡೀ ಕರ್ನಾಟಕವೇ ಕಣ್ಣೀರು ಹಾಕಿತು. ಒಂದು ವರದಿಯ ಪ್ರಕಾರ ಗಾಂಧಿಯ ಅಂತ್ಯ ಸಂಸ್ಕಾರದ ನಂತರ ಅತಿ ಹೆಚ್ಚು ಜನರು ಭಾಗವಹಿಸಿದ್ದು ಪುನೀತ್ ಅಂತಿಮ ಸಂಸ್ಕಾರದ ವೇಳೆ. ಅವರ ನಿಧನಾನಂತರ ಅವರ ಸಮಾಜಮುಖಿ ಕೆಲಸಗಳು ಬೆಳಕಿಗೆ ಬಂದವು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ನಡೆದುಕೊಂಡ ಬಂದ ಪುನೀತ್ ಅಸಂಖ್ಯಾತ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನು ಕರ್ನಾಟಕ ಸರ್ಕಾರ ಸ್ಪೂರ್ತಿಯ ದಿನವೆಂದು ಘೋಷಿಸಿದೆ.