ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಇತ್ತೀಚೆಗೆ ಅಪಾರ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಹರಿದು ಹೋಗಿರುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯಲ್ಲಿ ಗುಂಡಿಗಳು ಬಿದ್ದಿವೆ. ಇದರ ದುರಸ್ತಿಗಾಗಿ ರಾಜ್ಯ ಸರ್ಕಾರ 3 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲು ಮುಂದಾಗಿದೆ. ಶಾಸಕ ಅಶೋಕ ಮನಗೂಳಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಇತ್ತೀಚೆಗೆ ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದರು. ಸಂದರ್ಭದಲ್ಲಿ ಸೇತುವೆ ದುರಸ್ತಿ ಬಗ್ಗೆ ಸಚಿವರ ಗಮನಕ್ಕೂ ತೆಗೆದುಕೊಂಡು ಬಂದಿದ್ದರು. ಅದರಂತೆ ಇದೀಗ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಆಲಮೇಲ ತಾಲೂಕಿನ ಔರಾದ ಸದಾಶಿವಗಢ ರಾಜ್ಯ ಹೆದ್ದಾರಿ 34ರಲ್ಲಿ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ಗುಂಡಿಗಳು ಬಿದ್ದು ಸಂಪರ್ಕ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸೇತುವೆ ದುರಸ್ತಿಗೆ 3 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದ್ದು ಶೀಘ್ರದಲ್ಲೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿಯವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.