ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದ ಪಂಚ ಗ್ಯಾರೆಂಟಿಗಳಲ್ಲಿ ಗೃಹಲಕ್ಷ್ಮಿ(Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಗಳು ಇವೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮನೆ ಯಜಮಾನ್ತಿಗೆ 2 ಸಾವಿರ ರೂಪಾಯಿ ಹಾಕಲಾಗುತ್ತಿದೆ. ಆದರೆ, ಕಳೆದ ಎರಡ್ಮೂರು ತಿಂಗಳಿನಿಂದ ಹಣವೇ ಬಂದಿಲ್ಲವೆಂದು ಮಹಿಳೆಯರು ಹೇಳುತ್ತಿದ್ದಾರೆ. ಆರಂಭದಲ್ಲಿ ಹಾಕುತ್ತಿದ್ದ ಹಣ ನಿಧಾನವಾಗಿ ತಡವಾಗುತ್ತಾ ಬಂದಿತು. ಈಗ ಕಳೆದ ಸುಮಾರು ಮೂರು ತಿಂಗಳಿಂದ ಹಣ ಹಾಕಿಲ್ಲವಂತೆ. ಇದನ್ನು ಕೇಳಲು ಬ್ಯಾಂಕ್, ಸಂಬಂಧಿಸಿದ ಕಚೇರಿಗೆ ಹೋದರೆ ತಾಂತ್ರಿಕ ಕಾರಣಗಳನ್ನು ನಿಡಲಾಗುತ್ತಿದೆಯಂತೆ. ಕೆಲ ದಿನಗಳ ಹಿಂದೆ ಮೂರು ತಿಂಗಳ ಹಣ ಒಟ್ಟಿಗೆ ಹಾಕುತ್ತಾರೆ ಎನ್ನುವ ಸುದ್ದಿ ಹರಿದಾಡಿತು. ಆದರೆ, ಇದುವರೆಗೂ ಹಣ ಮಾತ್ರ ಬಂದಿಲ್ಲ.
ಅನ್ನಭಾಗ್ಯ ಯೋಜನೆ(Anna Bhagya Scheme) ಅಡಿ ಪೂರ್ತಿಯಾಗಿ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕುಟುಂಬದ ಪ್ರತಿ ಸದಸ್ಯನಿಗೆ 170 ರೂಪಾಯಿ ಹಣ ಹಾಕಲಾಗುತ್ತಿತ್ತು. ಅದು ಸಹ ಕಳೆದ ಹಲವು ತಿಂಗಳುಗಳಿಂದ ಬರುತ್ತಿಲ್ಲವಂತೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಡಿತರ ದವಸ ಧಾನ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಅದರ ಬದಲಾಗಿ ನೀಡುತ್ತಿರುವ 170 ರೂಪಾಯಿಯನ್ನು ಸಹ ಕಳೆದ ಹಲವು ತಿಂಗಳುಗಳಿಂದ ಬರುತ್ತಿಲ್ಲ. ಗ್ಯಾರೆಂಟಿ ಘೋಷಿಸಿರುವ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಹಣ ಹಾಕಲು ಕುಂಟು ನೆಪಗಳನ್ನು ಹೇಳುತ್ತಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.