ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಖಾಸಗಿ ಸ್ಲೀಪರ್ ಕೋಚ್ ಬಸ್ ವೊಂದು ಹೊತ್ತಿ ಉರಿದ ಘಟನೆ ತಡರಾತ್ರಿ ಅರಸಾಳು-ಸೂಡೂರು ಹತ್ತಿರ ನಡೆದಿದೆ. ಅದೃಷ್ಟವಶಾತ್ 40 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಅನ್ನಪೂರ್ಣ ಟ್ರಾವಲ್ಸ್ ಗೆ ಸೇರಿದ ಬಸ್ ಇದಾಗಿದೆ. ಹೊಸನಗರ ತಾಲೂಕಿನ ನಿಟ್ಟೂರಿನಿಂದ ಬೆಂಗಳೂರಿಗೆ ಬಸ್ ಪ್ರಯಾಣಿಸುತ್ತಿತ್ತು. ಶಿವಮೊಗ್ಗದತ್ತ ಬರುತ್ತಿದ್ದಾಗ ಅರಸಾಳು-ಸೂಡೂರು ಹತ್ತಿರ ಕಾಡಿನ ಮಧ್ಯ ಬಸ್ಸಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಅಲ್ಲದೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.




