ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಭಾನುವಾರ ಇಡೀ ಹುಬ್ಬಳ್ಳಿ ಧಗಧಗ ಎನ್ನುತ್ತಿತ್ತು. ಬೇಸಿಗೆಯ ಬಿಸಿಲಿಗಲ್ಲ. ಕಾಮಕ್ರಿಮಿಯೊಬ್ಬ 5 ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಹೀಗಾಗಿ ಜನರು ಆಕ್ರೋಶ ಭರಿತರಾಗಿದ್ದರು. ಅವನನ್ನು ಎನ್ ಕೌಂಟರ್ ಮಾಡಬೇಕು ಇಲ್ಲ ಜನತೆಯ ಕೈಗೆ ಕೊಡ್ರಿ ನಾವು ಅವನಿಗೆ ಪಾಠ ಕಲಿಸುತ್ತೇವೆ ಎನ್ನುತ್ತಿದ್ದರು. ಬಿಹಾರ ಮೂಲದ ಆರೋಪಿ ಪತ್ತೆಗೆ ಬೆಲೆ ಬೀಸಿದ ಪೊಲೀಸರಿಗೆ ಸಂಜೆ ತಾರಿಹಾಳ ಸೇತುವೆ ಬಳಿ ಪತ್ತೆಯಾಗಿದ್ದಾನೆ. ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಅಶೋಕ ನಗರದ ಠಾಣೆ ಪಿಎಸ್ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ನಂತರ ಆತನ ಕಾಲಿಗೆ, ಬೆನ್ನಿಗೆ ಗುಂಡು ಬಿದ್ದಿದೆ. ಆತನನ್ನು ವಶಕ್ಕೆ ಪಡೆದು ಕೆಎಂಸಿ ಆರ್ ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಪಿಎಸ್ಐ, ಸಿಬ್ಬಂದಿ ವೀರೇಶ, ಯಶವಂತ ಮೊರಬ ಗಾಯಗೊಂಡಿದ್ದಾರೆ.
ಘಟನೆ ಹಿನ್ನಲೆ: ಮುಂಜಾನೆ 10.45ರ ಸುಮಾರಿಗೆ ಬಾಲಕಿ ಅಪಹರಣವಾಗಿದೆ. 11.40ಕ್ಕೆ ಶವ ಪತ್ತೆಯಾಗಿದೆ. ಮಧ್ಯಾಹ್ನ 2 ಗಂಟೆ ಅಶೋಕನಗರ ಠಾಣೆ ಎದುರು ಸಾರ್ವಜನಿಕರ ಬೃಹತ್ ಪ್ರತಿಭಟನೆ. ಸಂಜೆ 5.30ಕ್ಕೆ ಬಾಲಕಿಯ ಶವಪರೀಕ್ಷೆ. ಸಂಜೆ 6.30ರ ಸುಮಾರಿಗೆ ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಎನ್ ಕೌಂಟರ್. ರಾತ್ರಿ 8ಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಎನ್ ಕೌಂಟರ್ ವಿಚಾರ ಘೋಷಣೆ. ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ. ಎನ್ ಕೌಂಟರ್ ವಿಚಾರ ತಿಳಿದು ಸಂಭ್ರಮಿಸಿದ ಜನತೆ. ಬಾಲಕಿ ಮೇಲೆ ಅತ್ಯಾಚಾರವಾಗಿದೆಯಾ ಇಲ್ಲವಾ ಅನ್ನೋದು ವೈದ್ಯಕೀಯ ವರದಿಯಿಂದ ತಿಳಿದು ಬರಬೇಕಿದೆ.