ಪ್ರಜಾಸ್ತ್ರ ವಿಶೇಷ ವರದಿ
ಸಿಂದಗಿ(Sindagi): ಇದೀಗ ಇಡೀ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣಗಳು ತಾಂಡವಾಡುತ್ತಿವೆ. ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವಾರು ಕಾರಣಗಳು ಸಾರ್ವಜನಿಕರು ಹೇಳುತ್ತಿದ್ದಾರೆ. ಅದರಲ್ಲಿ ಸಿಬ್ಬಂದಿ ಕೊರತೆಯೂ ಒಂದಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದಲೇ ಬಳುತ್ತಿದೆ ಎಂದು ಹೇಳಬಹುದು. ಯಾಕಂದರೆ ಇಲ್ಲಿ 94 ಹುದ್ದೆಗಳಿವೆ. ಪ್ರಸ್ತುತ ಕೆಲಸ ಮಾಡುತ್ತಿರುವವರ ಸಂಖ್ಯೆ ಕೇವಲ 38 ಇದೆ. ಹೀಗಾಗಿ ಬರೋಬ್ಬರಿ 56 ಸಿಬ್ಬಂದಿ ಕೊರತೆ ಇದೆ.
ವ್ಯಾಪಕವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲಿ ಸಿಂದಗಿಯೂ ಒಂದಾಗಿದೆ. ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳ ಜನರು ಚಿಕಿತ್ಸೆಗೆ ಇಲ್ಲಿ ಬರುತ್ತಾರೆ. ಆದರೆ, ಸಿಬ್ಬಂದಿ ಕೊರತೆಯಿಂದ ಸರಿಯಾಗಿ ಚಿಕಿತ್ಸೆ ಸಿಗದೆ ಜನರು ಪರದಾಡುವಂತಾಗಿದೆ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೆರಿಗೆಗೆ ಬರುವವರಲ್ಲಿ ಸಿಸೇರಿಯನ್ ಮಾಡಬೇಕಾದ ಪರಿಸ್ಥಿತಿ ಬಂದರೆ ಜಿಲ್ಲಾಸ್ಪತ್ರೆಗೆ ಕಳಿಸುವ ಸ್ಥಿತಿ ಇದ್ದು, ಇತ್ತೀಚೆಗೆ ಮೂರ್ನಾಲ್ಕು ಮಕ್ಕಳು ಮೃತಪಟ್ಟಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಸಿಂದಗಿ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಸಿಬ್ಬಂದಿಯ ತೀವ್ರ ಕೊರತೆಯ ಪರಿಣಾಮ ಸಾರ್ವಜನಿಕರ ಮೇಲೆ ಬೀರುತ್ತಿದೆ. ಇತ್ತೀಚೆಗೆ ಮೂರ್ನಾಲ್ಕು ಮಕ್ಕಳು ಮೃತಪಟ್ಟಿವೆ. ಸಿಸೇರಿಯನ್ ಗೆ ವ್ಯವಸ್ಥೆಯಿದ್ದರೂ, ಉನ್ನತ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೂಚಿಸಲಾಗುತ್ತಿದೆ. – ಹರ್ಷವರ್ಧನ ಪೂಜಾರಿ, ಸಾಮಾಜಿಕ ಹೋರಾಟಗಾರರು
ಇತ್ತೀಚೆಗೆ ಆಸ್ಪತ್ರೆಗೆ ಬೆಳಗಾವಿಯಿಂದ ಹಿರಿಯ ಅಧಿಕಾರಿಗಳ ತಂಡವೊಂದು ಭೇಟಿ ನೀಡಿದೆ. ಇಲ್ಲಿನ ವ್ಯವಸ್ಥೆ ಬಗ್ಗೆ, ಚಿಕಿತ್ಸೆ ನೀಡುತ್ತಿರುವ ಬಗ್ಗೆ, ಸಿಬ್ಬಂದಿ ಹಾಜರಾತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡು ಹೋಗಿದೆ. ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ ಮುಖ್ಯವೈದ್ಯಾಧಿಕಾರಿಗಳಾಗಿರುವ ಡಾ.ಶಂಕರ ದೇಶಮುಖ ಅವರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ…
ನಮಗೆ ಒಬ್ಬರು ಎಂಡಿ ಆಗಿರುವ ಫಿಜಿಷಿಯನ್ ಬೇಕು. ತುರ್ತು ಚಿಕಿತ್ಸಾ ವಿಭಾಗಕ್ಕೆ ಯಾರೂ ಇಲ್ಲ. ಅಲ್ಲಿ ನಾಲ್ಕು ಜನ ಎಂಬಿಬಿಎಸ್ ವೈದ್ಯರು ಬೇಕು. ಅನಸ್ತೇಷಿಯಾ, ಡೈನಾಕಾಲಜಿಸ್ಟ್ ಒಬ್ಬೊಬ್ಬರಿದ್ದು, ಇನ್ನು ಒಬ್ಬೊಬ್ಬರು ಬೇಕು. ಯಾಕಂದರೆ ನಮಗೆ ಇವರಿಂದ 24 ಗಂಟೆಯ ಸೇವೆ ಬೇಕಾಗುತ್ತದೆ. ಅರ್ಥೋಪಿಡಿಷಿಯನ್ ಮಾಗಿ ಎಂದು ಇದ್ದರು, ಅವರು ಪ್ರಭಾರಿ ಟಿಎಚ್ಒ ಆಗಿ ಹೋಗಿದ್ದು, ಅದೊಂದು ಖಾಲಿಯಿದೆ. ಚರ್ಮರೋಗ ವೈದ್ಯರು, ಸ್ಕ್ಯಾನಿಂಗ್ ವೈದ್ಯರು ಬೇಕು. ಡಿಎಚ್ಒ ಅವರಿಗೆ ಬಗ್ಗೆ ಹೇಳಲಾಗಿದೆ. ಅರ್ಜಿ ಬರುತ್ತಿಲ್ಲವೆಂದು ಹೇಳುತ್ತಿದ್ದಾರೆ. – ಡಾ.ಶಂಕರ ದೇಶಮುಖ, ಮುಖ್ಯ ವೈದ್ಯಾಧಿಕಾರಿಗಳು
ಹೀಗೆ ಪ್ರಮುಖವಾಗಿ ಇರಬೇಕಾದ ವೈದ್ಯರ ಕೊರೆತೆಯೇ ಇಲ್ಲಿ ಕಾಡುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ಈಗಿರುವ ವೈದ್ಯರು, ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡವಿದ್ದು, ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಮ್ಮೊಮ್ಮೆ ಸಾರ್ವಜನಿಕರೊಂದಿಗೆ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇದನ್ನು ತಪ್ಪಿಸಲು ಸಾರ್ವಜನಿಕರಿಗೂ ಒಳ್ಳೆಯ ಹಾಗೂ ತುರ್ತು ಸೇವೆ ಸಿಗುವಂತೆ ಕೊರೆತ ಇರುವ ಸಿಬ್ಬಂದಿ ನೇಮಕ ಮಾಡಬೇಕು. ಜೊತೆಗೆ ಈಗಿರುವ ಸಿಬ್ಬಂದಿ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಿದೆ.