ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕುಸುಮ-ಬಿ ಮತ್ತು ಸಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿ ಕುಸುಮ ಸಿ ಯೋಜನೆಯಡಿ ಸೌರಿಕರಣಗೊಳಿಸಿ ರೈತರಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕುಸುಮ-ಬಿ ಯೋಜನೆಯಡಿ 164 ನೀರಾವರಿ ಪಂಪಸೆಟ್‌ಗಳ ಪೈಕಿ 27 ನೀರಾವರಿ ಪಂಪಸೆಟ್‌ಗಳಿಗೆ ಸೌರಶಕ್ತಿ ಚಾಲಿತ ಪಂಪಸೆಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಫಲಾನುಭವಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ರೈತರಿಗೆ ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಸೌರಮಿತ್ರ ಪೋರ್ಟಲ್ ಮೂಲಕ 2,295 ರೈತರು ಸೋಲಾರ್ ಪಂಪಸೆಟ್ ಅಳವಡಿಸಿಕೊಳ್ಳಲು ನೊಂದಾಯಿಸಿಕೊಂಡಿದ್ದು, ಸ್ಥಳಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಧಾನಮಂತ್ರಿ ಕುಸುಮ-ಸಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 17 ವಿದ್ಯುತ್ ಉಪ ಕೇಂದ್ರಗಳ ಮೂಲಕ 40 ವಿದ್ಯುತ್ ಮಾರ್ಗಗಳನ್ನು ಸೌರೀಕರಣ ಮಾಡಲು ಉದ್ಧೇಶಿಸಿ 87.71 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಮಾರ್ಚ್ 29, 2025ರಂದು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ 110/11 ಕೆವ್ಹಿ, ಚಡಚಣ ವಿದ್ಯುತ್ ಉಪ ಕೇಂದ್ರದಲ್ಲಿ ಒಂದು 11 ಕೆವ್ಹಿ ಮಾರ್ಗವನ್ನು ಸೌರೀಕರಣಗೊಳಿಸಿ ಚಾಲನೆಗೊಳಿಸಲಾಗಿದೆ. ಇದರಿಂದ 2.77 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ. ಹಗಲು ವೇಳೆಯಲ್ಲಿ ನಿರಂತರವಾಗಿ ಏಳು ತಾಸು ನೀರಾವರಿ ಮಾರ್ಗಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.