ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಸಿಲಿಂಡರ್ ಸ್ಫೋಟಗೊಂಡು 7 ಜನರು ಗಾಯಗೊಂಡ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ರಾಜೇಶ್ ಎಂಬುವರ ಮನೆಯಲ್ಲಿ ಶುಕ್ರವಾರ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ತೀವ್ರತೆಗೆ ಮನೆ ಛಿದ್ರವಾಗಿದೆ. ಮನೆಯಲ್ಲಿದ್ದ 7 ಜನರು ಗಾಯಗೊಂಡಿದ್ದಾರೆ.
ರಾಜೇಶ್, ಸುರೇಶ್, ದುರಗಪ್ಪ, ನಾಗರಾಜ, ವಿಷ್ಣು, ಶ್ರೀಕಾಂತ್, ಹುಲಿಗೆಮ್ಮ, ಹುಸೇನಮ್ಮ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರಾಜೇಶ್, ಸುರೇಶ್ ಹಾಗೂ ದುರಗಪ್ಪ ಅವರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದಾಗಿ ತಂದ ಗ್ಯಾಸ್ ಸೋರಿಕೆಯಿಂದ ವಾಸನೆ ಬರುತ್ತಿತ್ತು. ಆದರೆ, ಮಹಿಳೆ ಗ್ಯಾಸ್ ಹಚ್ಚಲು ಹೋದಾಗ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.




