ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ನಾಯಕಿ, ಬಿಬಿಎಂಪಿ ಸದಸ್ಯೆಯಾಗಿದ್ದ ರೇಖಾ ಕದರೇಶ್ ಕೊಲೆ ಪ್ರಕರಣದಲ್ಲಿ 7 ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಅಪರಾಧ ಸಾಬೀತಾದ ಹಿನ್ನಲೆಯಲ್ಲಿ 72ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ರೇಖಾ ಕದರೇಶ್ ಅವರನ್ನು ಅವರ ಕಚೇರಿ ಮುಂದೆಯೇ 2021ರಲ್ಲಿ ಹತ್ಯೆ ಮಾಡಲಾಗಿತ್ತು. ಇವರ ಪತಿಯನ್ನು 2018ರಲ್ಲಿಯೇ ಕೊಲೆ ಮಾಡಲಾಗಿದೆ.
ಅಂಜನಪ್ಪ ಗಾರ್ಡನ್ ನಿವಾಸಿಯಾಗಿರುವ ರೇಖಾ ಛಲವಾದಿಪಾಳ್ಯ ವಾರ್ಡ್ ಸದಸ್ಯೆಯಾಗಿದ್ದರು. ಪತಿ ಹತ್ಯೆಯ ಬಳಿಕ ಪತಿ ಕುಟುಂಬಸ್ಥರಿಂದ ದೂರು ಉಳಿದಿದ್ದರು. ಇದರಿಂದಾಗಿ ಪತಿ ಸಹೋದರಿ ಮಾಲಾ ಹಾಗೂ ಸಂಬಂಧಿಕರು ಅಸಮಾಧಾನಗೊಂಡಿದ್ದರು. ಕದಿರೇಶ್ ಜೊತೆಗಿದ್ದ ಪೀಟರ್ ನನ್ನು ರೇಖಾ ದೂರು ಮಾಡಲು ಪ್ರಯತ್ನಿಸಿದ್ದರಂತೆ. ರಾಜಕೀಯವಾಗಿ ಆಕೆಯೊಬ್ಬಳೇ ಬೆಳೆಯುತ್ತಿದ್ದಾಳೆ ಎಂದು ಮಾಲಾ, ಪೀಟರ್ ಜೊತೆ ಸೇರಿ ಸಂಚು ರೂಪಿಸಿದ್ದರು. 2021ರಲ್ಲಿ ರೇಖಾ ಕಚೇರಿಯ ಮುಂದೆಯೇ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 24 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಮಾಲಾ ಹಾಗೂ ಆಕೆಯ ಪುತ್ರ ಅರುಣಕುಮಾರ್ ಆರೋಪಿಗಳಾಗಿದ್ದರು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿಯೇ ಮಾಲಾ ಮೃತಪಟ್ಟಿದ್ದಾಳೆ. ಇದೀಗ 7 ಜನರ ವಿರುದ್ಧ ಅಪರಾಧ ಸಾಬೀತಾಗಿದೆ. ಹೀಗಾಗಿ ಪೀಟರ್, ಸ್ಟೀಫನ್, ಅಜಯ್, ಸೂರಜ್, ಪುರುಷೋತ್ತಮ್, ಸೆಲ್ವರಾಜ್ ಹಾಗೂ ಮಾಲಾ ಪುತ್ರ ಅರುಣಕುಮಾರಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2021 ಸೆಪ್ಟೆಂಬರ್ ನಲ್ಲಿ ಕಾಟನ್ ಪೇಟೆ ಪೊಲೀಸರು 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದರು.