ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಹೈದರಾಬಾದ್ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ಹಣ ದುರ್ಬಳಕೆ ಆರೋಪ ಸಂಬಂಧ, ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ಮನೆ ಇಡಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. 9 ಇನೋವಾ ಕಾರುಗಳಲ್ಲಿ ಬರೋಬ್ಬರಿ 30 ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
2018ರಿಂದ 2022ರ ವರೆಗೆ 282 ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ಆದ 81.21 ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಮುಖಂಡ, ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಂ ಪಾಟೀಲ, ಕಾಲೇಇನ ಅಕೌಂಟೆಂಟ್ ಸುಭಾಷ ಜಗನ್ನಾಥ ಹಾಗೂ ಕೆನರಾ ಬ್ಯಾಂಕ್ ಎಂಆರ್ ಎಂಸಿ ಮ್ಯಾನೇಜರ್ ವಿರುದ್ಧ ಮಾರ್ಚ್ 31, 2023ರಲ್ಲಿ ಪ್ರಕರಣ ದಾಖಲಾಗಿತ್ತು.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸ್ಟೈಫಂಡ್ ಹಣ ಜಮಾ ಮಾಡಿಸಿ, ನಂತರ ಖಾಲಿ ಚೆಕ್ ಗಳಿಗೆ ಅವರಿಂದ ಬಲವಂತವಾಗಿ ಸಹಿ ಮಾಡಿಸಿಕೊಂಡು ಹಣ ಡ್ರಾ ಮಾಡಿಕೊಂಡಿರುವ ಆರೋಪವಿದೆ. ಆ ಹಣವನ್ನು ಈ ನಾಲ್ವರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿ ಇವರ ಮನೆಗಳ ಶೋಧ ನಡೆಸಿದ್ದಾರೆ.