ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಳೆದ ಸೆಪ್ಟೆಂಬರ್ 16ರಂದು ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಎಸ್ ಬಿಐ ಬ್ಯಾಂಕ್ ಗೆ ಮೂವರು ಮುಸುಕುಧಾರಿಗಳು ನುಗ್ಗಿ ದರೋಡೆ ಮಾಡಿದ್ದರು. 1.4 ಕೋಟಿ ನಗದು ಹಾಗೂ ಅಂದಾಜು 20 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಮಹಾರಾಷ್ಟ್ರ ಮೂಲದ ಓರ್ವ ಆರೋಪಿ, ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ಮೂವರನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯಸ್ಥೆಯ ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದೆ. ಅವರನ್ನು ಹಾಗೂ ಉಳಿದ ನಗದು, ಚಿನ್ನಾಭರಣ ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆದಿದೆ. ಈಗ 9.01 ಕೆಜಿ ಬಂಗಾರ, 86,31,220 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಅಕ್ಟೋಬರ್ 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ತನಿಖೆ ದೃಷ್ಟಿಯಿಂದ ಆರೋಪಿ ಹೆಸರು ಬಹಿರಂಗ ಪಡಿಸುತ್ತಿಲ್ಲ ಎಂದರು.
ಇನ್ನು ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ರಕ್ಷಕಕುಮಾರ ಮಾತೊ(21), ರಾಕೇಶಕುಮಾರ ಸುಹಾನಿ(22) ಹಾಗೂ ರಾಜಕುಮಾರ ಪಾಸ್ವಾನ(21) ಬಂಧಿಸಿ ಕೋರ್ಟಿಗೆ ಹಾಜರು ಪಡಿಸಲಾಗಿದೆ. ಬ್ಯಾಂಕ್ ದರೋಡೆ ಮಾಡಲು ಮಂಗಳವೇಡಾದಲ್ಲಿ ಒಂದು ಕಾರು ಕಳ್ಳತನ ಮಾಡಿ, ಅದಕ್ಕೆ ಕೃತ್ಯಕ್ಕೆ ಬಳಸಿದ್ದರು ಅಂತಾ ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿ ಇತರೆ ಹಿರಿಯ ಅಧಿಕಾರಿಗಳಿದ್ದರು.