ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮೇ 20 ಮಂಗಳವಾರದಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಮಾಡುವುದರೊಂದಿಗೆ ನೆಮ್ಮದಿ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಿಂದ 9,782 ಕಂದಾಯ ಗ್ರಾಮಗಳ ಫಲಾನುಭವಿಗಳು, ದರಖಾಸ್ತು ಪೋಡಿ ಫಲಾನುಭವಿಗಳು 14, ಪೋಡಿ ಮುಕ್ತ ಗ್ರಾಮಗಳ ಫಲಾನುಭವಿಗಳು 139 ಹಾಗೂ 253 ಪೌತಿ ಖಾತೆ ಫಲಾನುಭವಿಗಳು ಸೇರಿದಂತೆ ಜಿಲ್ಲೆಯಿಂದ 10,188 ಫಲಾನುಭವಿಗಳು ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲೆಯ ಫಲಾನುಭವಿಗಳನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿ ವತಿಯಿಂದ 200 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್‌ಗೆ ಓರ್ವರಂತೆ ವಿಎಓ, ಎಸ್‌ಡಿಎಗಳನ್ನು ಮಾರ್ಗಾಧಿಕಾರಿಗಳೆಂದು ನೇಮಕ ಮಾಡಿ ಅವರಿಗೆ ಸಹಾಯಕರಾಗಿ ಗ್ರಾಮ ಸಹಾಯಕರನ್ನು ನೇಮಿಸಲಾಗಿದೆ. ಸಂಪೂರ್ಣ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಆಯಾ ತಾಲೂಕಿನ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳನ್ನು ಸೂಚಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.