ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagra): ಸಾಲಮರದ ತಿಮ್ಮಕ್ಕ ಅವರ ಜೀವನ ಆಧಾರಿತ ಸಿನಿಮಾ ಮಾಡುತ್ತಿದ್ದು, ಅದನ್ನು ನಿಲ್ಲಿಸಬೇಕು ಎಂದು ಅವರ ಸಾಕುಮಗ ಉಮೇಶ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿರ್ದೇಶಕ ಒರಟ ಶ್ರೀ ಹಾಗೂ ದಿಲೀಪ್ ಎಂಬುವರು ತಿಮ್ಮಕ್ಕ ಅವರ ಸ್ವಗ್ರಾಮವಾದ ಹುಲಿಕಲ್ಲನಲ್ಲಿ ಚಿತ್ರೀಕರಣ ಮಾಡುತ್ತಿರುವುದು ತಿಳಿದು ಬಂದಿದೆ. ಚಿತ್ರ ತಂಡ ಇವರನ್ನು ಸಂಪರ್ಕ ಮಾಡದೆ ಸಿನಿಮಾ ಮಾಡುತ್ತಿದೆ. ಇದು ತಮಗೆ ಇಷ್ಟವಿಲ್ಲ ಎಂದು ಹೇಳಿ ದೂರು ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಚಿತ್ರೀಕರಣ ನಿಲ್ಲಿಸುವಂತೆ ಸೂಚನೆ ನೀಡಿದೆ. ಅವರ ಅನುಮತಿ ಪಡೆದು ಶೂಟಿಂಗ್ ಮಾಡಲು ಹೇಳಿದೆ. ಹೀಗಾಗಿ ಸಿನಿಮಾ ತಂಡ ವಾಪಸ್ ಆಗಿದೆ ಎಂದು ತಿಳಿದು ಬಂದಿದೆ. ಒರಟ ಶ್ರೀ, ದಿಲೀಪ್ ಅವರು ನಮ್ಮನ್ನು ಭೇಟಿಯಾಗಿ ತಿಮ್ಮಜ್ಜಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ನಾವು ಅನುಮತಿ ನೀಡಿರಲಿಲ್ಲ. ಆದರೂ ಶೂಟಿಂಗ್ ಶುರು ಮಾಡಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ದೂರು ದಾಖಲಿಸಿದ್ದೇವೆ ಎಂದು ಉಮೇಶ ಹೇಳಿದ್ದಾರೆ.