ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪುಟ್ಟ ಮಕ್ಕಳಿಬ್ಬರನ್ನು ಹತ್ಯೆ ಮಾಡಿದ ದಂಪತಿ ತಾವು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇಂದು ಮುಂಜಾನೆ ಕೆಲಸದವರು ಮನೆಗೆ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಸದಾಶಿವ ನಗರದ ಆರ್ ಎಂ.ವಿ 2ನೇ ಹಂತದ ಟೆಂಪಲ್ ರಸ್ತೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಅನೂಪ್(38), ಪತ್ನಿ ರಾಖಿ(35) ಹಾಗೂ ಇವರ ಮಕ್ಕಳಾದ ಅನುಪ್ರಿಯಾ(05), ಪ್ರಿಯಾಂಶ್(02) ಮೃತರೆಂದು ತಿಳಿದು ಬಂದಿದೆ.
ಇಬ್ಬರು ಸಾಫ್ ವೇರ್ ಇಂಜಿನಿಯರ್ ಇದ್ದರು. ಮೂವರು ಕೆಲಸಗಾರರಿದ್ದರು. ಅಡುಗೆ ಮಾಡಲು, ಮಗು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಆರ್ಥಿಕವಾಗಿ ಸ್ಥಿತಿವಂತರಿದ್ದರು. ನಾಳೆ ಮುಂಜಾನೆ ಪಾಂಡಿಚೇರಿಗೆ ಹೋಗಲಿದ್ದೇವೆ. ಬೆಳಗ್ಗೆ ಬೇಗ ಬನ್ನಿ ಎಂದು ಕೆಲಸಗಾರರಿಗೆ ಹೇಳಿದ್ದರಂತೆ. ಅಲ್ಲದೆ ನಿನ್ನೆ ಬಟ್ಟೆ ಪ್ಯಾಕ್ ಮಾಡುವಾಗ, ರಾತ್ರಿಯೂ ಚೆನ್ನಾಗಿಯೇ ಇದ್ದರು ಎಂದು ಹೇಳಲಾಗುತ್ತಿದೆ. ಮೊದಲು ಮಗುಗೆ ಆರೋಗ್ಯ ಸಮಸ್ಯೆಯಿದ್ದು, ಇದರಿಂದ ದಂಪತಿ ಸಾಕಷ್ಟು ಬೇಸರ ಮಾಡಿಕೊಂಡಿದ್ದರಂತೆ. ಆದರೆ, ಇದ್ದಕ್ಕಿದಂತೆ ಈ ರೀತಿಯ ನಿರ್ಧಾರ ಅದ್ಹೇಗೆ ತೆಗೆದುಕೊಂಡರು ಅನ್ನೋದು ಎಲ್ಲರಿಗೂ ಶಾಕ್ ಆಗಿದೆ. ಪೊಲೀಸ್ ತನಿಖೆಯಿಂದ ಇದರ ಹಿಂದಿನ ಸತ್ಯ ತಿಳಿದು ಬರಬೇಕಿದೆ.