ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಳೆದ ತಿಂಗಳು ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ನಕಲಿ ಪತ್ರಕರ್ತರು ನಮಗೆ ಕಿರುಕುಳನೀಡುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ಬೈತ್ತಿದ್ದಾರೆ ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಆದರೆ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪತ್ರಕರ್ತ ನಿಂಗರಾಜ ಅತನೂರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನಾನು ಪತ್ರಿಕಾ ವೃತ್ತಿಯಲ್ಲಿದ್ದೇನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಇದೆ. ನೀವು ಯಾಕೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ನಮ್ಮನ್ನು ಕೇಳಿದಾಗ ನಾವುಗಳು ನೇರವಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಜೊತಗೆ ಮಾತನಾಡಬಾರದು ಎಂಬ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದ್ದೇವೆ. ಸುಮಾರು ದಿನ ಕಳೆದರೂ ಮಾಹಿತಿ ನೀಡಲಿಲ್ಲ. ಅಲ್ಲಿನ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದೇವೆ ಎಂದು ದೂರು ದಾಖಲಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದರು.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರಿಗೆ ಈ ರೀತಿಯಾದರೆ ಇನ್ನೂ ಜನ ಸಾಮಾನ್ಯರ ಪಾಡೇನು? ಸರ್ಕಾರಿ ಸೇವೆ ಮಾಡಲು ಬಂದ ಅಧಿಕಾರಿಗಳು ಸೇವೆ ಮಾಡುವುದು ಬಿಟ್ಟು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಯಾವ ರಾಜ್ಯ ಅಥವಾ ತಾಲೂಕು ಎಂದು ತಿಳಿಯಬೇಕು. ಪ್ರಶ್ನೆ ಮಾಡದಿರುವಷ್ಟು ಇಲ್ಲಿನ ವೈದ್ಯರು ಬಲಿಷ್ಟವಾಗಿದ್ದಾರೆ ಎಂದರೆ ಆಸ್ಪತ್ರೆಗೆಂದು ಬರುವ ರೋಗಿಗಳ ಹಣೆಬರಹ ಹೇಗೆ ಎಂದು ಪ್ರಶ್ನಿಸಿದರು. ನಮ್ಮ ಮೇಲೆ ಆಸ್ಪತ್ರೆಯ ಸಿಬ್ಬಂದಿ ಮಾಡಿರುವ ದಾಖಲೆ ಸುಳ್ಳಿದೆ. ಅಲ್ಲಿ ಸುಮಾರು 35 ಸಿಸಿ ಟಿವಿ ಕ್ಯಾಮೆರಾಗಳಿವೆ ಅವುಗಳನ್ನು ನೋಡಿ ಸಂಪೂರ್ಣ ತನಿಖೆ ಮಾಡಿ. ತಪ್ಪು ಯಾರದಿದೆ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ನಮ್ಮದು ಒಂದು ಕೌಂಟರ್ ಕೇಸ್ ದಾಖಲು ಮಾಡಿಕೊಂಡು ಸತ್ಯ ಅಸತ್ಯ ಏನೆಂಬುದನ್ನು ತನಿಖೆ ಮಾಡಬೇಕು ಎಂದರು.
ಕಳೆದ ತಿಂಗಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಸಮಸ್ಯೆ ಮತ್ತು ಒಂದು ಬಾಣಂತಿ ಸಾವಿನ ವಿಷಯದ ಬಗ್ಗೆ ಅವರ ಜೊತೆಗೆ ಚರ್ಚೆ ಮಾಡಿದ ಸಲುವಾಗಿ ಈ ರೀತಿಯಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಇನ್ನೋರ್ವ ಪತ್ರಕರ್ತ ಶಿವಕುಮಾರ ಬಿರಾದಾರ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರಿಂದ ಮಾಹಿತಿ ತಿಳಿದಾಗ ಮಾಹಿತಿ ಹಕ್ಕು ಅಧಿನಿಯಮದಡಿ ನವೆಂಬರ್ 14ರಂದು ಆಸ್ಪತ್ರೆಯ 6 ಜನ ಸಿಬ್ಬಂದಿ ಸಂಬಳ ಮತ್ತು ಬಯೋಮೆಟ್ರಿಕ್ ಹಾಜರಾತಿ ನಕಲು ಪ್ರತಿ ಒದಗಿಸುವಂತೆ ಮಾಹಿತಿ ಕೇಳಲಾಯಿತು. ಕೊಡುವುದಕ್ಕೆ ಬರುವುದಿಲ್ಲ ಎಂದು ಹೇಳಿದರು. ಅದಕ್ಕೆ ಹಿಂಬರಹ ನೀಡಿ ಎಂದಾಗ ನವೆಂಬರ್ 27ರಂದು ನೀಡಿದರು. ಬರದೆ ಇರುವುದಕ್ಕೆ ಉತ್ತರ ನೀಡಿದಾಗ ಒಂದು ವರ್ಷದಲ್ಲಿ ಡಾ.ರಾಜಶೇಖರ ಎಸ್. 150, ಡಾ.ರಮೇಶ ರಾಠೋಡ 77, ಡಾ.ಸಾಯಬಣ್ಣ ಗುಣಕಿ 58, ಡಾ.ಶಂಕರರಾವ್ ದೇಶಮುಖ 217, ಡಾ.ವಿಜಯಮಹಾಂತೇಶ 66 ದಿನ ಗೈರು ಹಾಜರಾಗಿ ವರ್ಷದ ಸಂಪೂರ್ಣ ಸಂಬಳ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಮಾಧ್ಯಮದವರ ಮುಂದೆ ತೋರಿಸಿದರು. ಹೀಗೆ ನಮ್ಮ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿ ಪ್ರಕರಣ ದಾಖಲಿಸಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಮೇಲೆ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.