ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಬೀದರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವೈಮಾನಿಕ ಸಮೀಕ್ಷೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆಪ್ಟೆಂಬರ್ ಮೊದಲ ವಾರದವರೆಗೂ ಆಗಿರುವ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಮುಗಿದು ಪರಿಹಾರ ವಿತರಣೆ ಆಗುವ ಸಿದ್ಧತೆಯಲ್ಲಿದ್ದಾಗ ಎರಡನೇ ಸುತ್ತಿನ ಬೆಳೆ ಹಾನಿ ಆಗಿದೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದ ಬಳಿಕವೂ ಆಗಿರುವ ಬೆಳೆ ಹಾನಿಯ ಸಮೀಕ್ಷೆಯನ್ನೂ ಮುಗಿಸಿ ಎಲ್ಲರಿಗೂ ಒಟ್ಟಿಗೇ ಪರಿಹಾರ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇವೆ. ಇಲ್ಲದಿದ್ದರೆ ಕೆಲವರಿಗೆ ಮಾತ್ರ ಪರಿಹಾರ ಬಂದಿದೆ, ನಮಗೆ ಬಂದಿಲ್ಲ ಎನ್ನುವ ಗೊಂದಲ, ಅನುಮಾನಗಳು ಶುರುವಾಗಬಹುದು. ಈ ಕಾರಣಕ್ಕೆ ಎಲ್ಲರಿಗೂ ಒಟ್ಟಿಗೆ ಪರಿಹಾರ ಒದಗಿಸುವುದು ಸೂಕ್ತವಾಗಿದೆ.
ರಾಜ್ಯ ಸರ್ಕಾರದ ಬಳಿ ಹಣಕ್ಕೆ ಕೊರತೆ ಇಲ್ಲ. ಪಿಡಿ ಖಾತೆಯಲ್ಲಿ ಹಣ ಲಭ್ಯವಿದೆ. ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಿರಂತರವಾಗಿ ನಡೆಸಲಾಗುವುದು. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ, ಪುನರ್ವಸತಿ ಕಲ್ಪಿಸಲು ಸಾಧ್ಯವಾಗದ ಗ್ರಾಮಗಳ ಸ್ಥಳಾಂತರದ ಬಗ್ಗೆ ಹಿಂದಿನ ಎಲ್ಲಾ ಇಲಾಖೆ ಅನುಭವಗಳನ್ನು ಪರಿಗಣಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ಪ್ರವಾಹದಿಂದ ಕೃಷಿ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುತ್ತದೆ. ಇದರಿಂದ ಪರಿಹಾರ ಕೊಟ್ಟರೂ ಬೆಳೆ ಬೆಳೆಯುವುದು ಕಷ್ಟ. ಹೀಗಾಗಿ ಕೆರೆಗಳಲ್ಲಿರುವ ಫಲವತ್ತಾದ ಹೂಳನ್ನು ತೆಗೆದು ಫಲವತ್ತತೆ ಕಳೆದುಕೊಂಡ ಕೃಷಿ ಭೂಮಿಗೆ ಹಾಕಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮಧ್ಯಂತರ ಅವಧಿಗೆ “ಪ್ರಕೃತಿ ವಿಕೋಪದಿಂದ ಆದ ಹಾನಿ” ಎಂದು ಅಧಿಸೂಚನೆ ಹೊರಡಿಸಲಾಗುವುದು. ವಿಮಾ ಕಂಪನಿಗಳು ಕೃಷಿ ವಿಮೆಯನ್ನು ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಬಾರದು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆ ಪರೀಕ್ಷಿಸಲಾಗುವುದು. ಅಂತರ್ಜಲ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹೆಚ್ಚುವ ಅಪಾಯವಿದ್ದು, ಆರೋಗ್ಯ ರಕ್ಷಣೆಗೆ ಗಮನ ಹರಿಸಲಾಗುವುದು. ಶಾಲಾ ಮಕ್ಕಳ ಹಾಸ್ಟೆಲ್ ಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಸಲಾಗುವುದು. ಮಳೆಯಲ್ಲಿ ದಾಖಲೆಗಳು, ಗುರುತಿನ ಚೀಟಿ ಕೊಚ್ಚಿ ಹೋಗಿರುವ , ಹಾಳಾಗಿರುವುದು ವರದಿಯಾಗಿದೆ. ಆ ಜನರು ಆತಂಕ ಪಡುವ ಅಗತ್ಯ ಇಲ್ಲದಂತೆ ಅಭಿಯಾನದ ರೂಪದಲ್ಲಿ ಹೊಸ ಗುರುತಿನ ಚೀಟಿ, ದಾಖಲೆಗಳು ಒದಗಿಸಲಾಗುವುದು. ಜಂಟಿ ಸಮೀಕ್ಷೆ ಅತ್ಯಂತ ಸಮರ್ಪಕ ಮತ್ತು ವೈಜ್ಞಾನಿಕವಾಗಿ ಮಾಡಬೇಕಿದ್ದು, ಕಂದಾಯ ಇಲಾಖೆಯಿಂದ ಸಾವಿರ ಕೋಟಿಯಷ್ಟು ಪರಿಹಾರ ಕೊಡಬೇಕಾಗಬಹುದು ಎನ್ನುವ ಅಂದಾಜಿನಲ್ಲಿ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರ ಸರ್ಕಾರ ಪ್ರವಾಹಕ್ಕೆ 2,200 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಮಹಾರಾಷ್ಟ್ರಕ್ಕೆ ಕೊಡುವ ಮಾದರಿಯಲ್ಲೇ ರಾಜ್ಯಕ್ಕೂ ಪರಿಹಾರ ಹಣವನ್ನು ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗುವುದು.
ಹವಾಮಾನ ಬದಲಾವಣೆಯ ತೀವ್ರ ಪರಿಣಾಮವನ್ನು ರಾಜ್ಯ ಎದುರಿಸುತ್ತಿದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಇದರ ಪರಿಣಾಮ ಮತ್ತು ಅನಾಹುತಗಳು ಆಗಿವೆ. ಎಸ್.ಡಿ.ಆರ್.ಎಫ್ ನಾರ್ಮ್ಸ್ ಪ್ರಕಾರ ಪರಿಹಾರದ ಜೊತೆಗೆ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎನ್ನುವ ಬೇಡಿಕೆ ಇದೆ. ಹೆಕ್ಟೇರ್ ಗೆ 8,500 ರೂ, ತರಿ ನೀರಾವರಿ ಜಮೀನಿಗೆ 17 ಸಾವಿರ ಇದೆ. ಕೆರೆ ಕ್ರಾಪ್ ಗೆ 22 ಸಾವಿರದ 500 ರೂಪಾಯಿ ಸಮೀಕ್ಷೆ ಮುಗಿದ ತಕ್ಷಣ ಈ ಮಾನದಂಡದಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು. 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಇದುವರೆಗೂ 5 ಲಕ್ಷ ಹೆಕ್ಟೇರ್ ಮಾತ್ರ ಜಂಟಿ ಸಮೀಕ್ಷೆ ಆಗಿದೆ. 5 ಲಕ್ಷ ಬಾಕಿ ಇದ್ದು, ಇದನ್ನು ಕೂಡ ಬೇಗನೆ ಮುಗಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಿ ನೆರವಾಗಲು ನಾವು ಬದ್ಧರಿದ್ದೇವೆ ಅಂತಾ ಹೇಳಿದರು.