ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗುಮ್ಮಟನಗರಿಗೆ ದರೋಡೆ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಪೊಲೀಸರು ಇತ್ತೀಚೆಗೆ ಪ್ರಕಟಣೆ ಹೊರಡಿಸಿದ್ದಾರೆ. ಇದರ ನಡುವೆ ಕಳೆದ ರಾತ್ರಿ ದರೋಡೆ ಗ್ಯಾಂಗ್ ಮನೆಯೊಂದಕ್ಕೆ ನುಗ್ಗಿ ಪತಿ, ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದೆ. ನಗರದ ಚೈನಾಪುರ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಮುಸುಕುಧಾರಿ ಗ್ಯಾಂಗ್ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಂತೋಷ್ ಎಂಬುವರ ಮನೆಗೆ ನುಗ್ಗಿದೆ. ಇವರಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದೆ. ಇವರ ಪತ್ನಿ ಭಾಗ್ಯಲಕ್ಷ್ಮಿ ಮೇಲೂ ದಾಳಿ ಮಾಡಿದೆ. ಗಾಯಗೊಂಡಿರುವ ಸಂತೋಷನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ದರೋಡೆ ಗ್ಯಾಂಗ್ ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.