ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆನಾಡು ಮಂಡ್ಯದಲ್ಲಿ ಅದ್ಧೂರಿಯಾಗಿ ಜರಗುತ್ತಿದೆ. ಗೊ.ರು ಚನ್ನಬಸಪ್ಪ ಅವರು ಸರ್ವಾಧ್ಯಕ್ಷರಾಗಿದ್ದು, ವಿಶೇಷವಾಗಿ ನಿರ್ಮಿಸಲಾದ ರಥದಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತಿದೆ. ಮೈಸೂರು ಅರಮನೆ ದರ್ಬಾರ್ ಸಿಂಹಾಸನದ ಮಾದರಿಯಲ್ಲಿ ರಥವನ್ನು ಸಿದ್ಧಪಡಿಸಲಾಗಿದೆ. ನಿರ್ಮಲಾನಂದ ಸ್ವಾಮೀಜಿಯವರು ಮೊದಲ ರಥ ಏರಿ ಸರ್ವಾಧ್ಯಕ್ಷರನ್ನು ಬರಮಾಡಿಕೊಂಡರು.
ಸುಗಂಧರಾಜ ಹೂವು, ರೇಷ್ಮೆ ಹಾರ, ಮೈಸೂರು ಪೇಟ, ಶಾಲು ಹೊದಿಸಿ ಗೌರವಿಸಲಾಯಿತು. ದಾರಿಯುದ್ಧಕ್ಕೂ ಕನ್ನಡದ ಗೀತೆಗಳು ರಿಂಗಣಿಸುತ್ತಿವೆ. ಸರ್.ಎಂ ವಿಶ್ವವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ 6 ಕಿಲೋ ಮೀಟರ್ ದೂರದ ವೇದಿಕೆಯತ್ತ ಮೆರವಣಿಗೆ ಸಾಗಿದೆ. ಸಚಿವ ಚೆಲುವರಾಯಸ್ವಾಮಿ, ಪುರುಷೋತ್ತಮನಾಂದ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ, ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.
31 ಜಿಲ್ಲೆಗಳಿಂದ 38 ಕಲಾ ತಂಡಗಳು ಸೇರಿದಂತೆ 157 ಕಲಾತಂಡಗಳೊಂದಿಗೆ 2,250 ಕಲಾವಿದರು ಭಾಗವಹಿಸಿದ್ದು, ನಾಡಿನ ವಿವಿಧ ಕಲಾ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಸಾಹಿತ್ಯದ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಕುಂಭಮೇಳ ವಿರೋಧಿಸಿರುವ ಕೆಲವು ಮಹಿಳೆಯರು ಪುಸ್ತಕಗಳನ್ನು ಹೊತ್ತುಕೊಂಡು ಹೆಜ್ಜೆ ಹಾಕಿದರೆ, ಕೆಲವರು ಕುಂಭಮೇಳ ಹೊತ್ತು ಸಾಗಿದರು.