ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗುಮ್ಮಟನಗರಿಯ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ಘಟನೆಯೊಂದು ನಡೆದು ಕೊನೆಗೂ ಸುಖಾಂತ್ಯ ಕಂಡಿದೆ. ವ್ಯಕ್ತಿಯೊಬ್ಬರು ಮತ್ತೊಬ್ಬರ ಒಂದು ವರ್ಷದ ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ. ಒಂದು ದಿನದ ಬಳಿಕ ವಾಪಸ್ ತಂದುಕೊಟ್ಟ ಘಟನೆ ನಡೆದಿದೆ. ಈ ರೀತಿ ನಡೆದುಕೊಂಡ ವ್ಯಕ್ತಿ ದೇವರ ಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಛಲವಾದಿ(38) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ ಏನು:
ಮುಧೋಳದ ರಾಮೇಶ್ವರಿ ಸಾಳುಂಕೆ ಎಂಬುವರು ಅನಾರೋಗ್ಯದ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿಯನ್ನು ನೋಡಲು ಮಗಳು ಪದ್ಮಾ ತಮ್ಮ ಒಂದು ವರ್ಷದ ಗಂಡು ಮಗುವೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಹೇಳಿದ ಔಷಧಿ ತರಲು ಮಗ ಸಂದೀಪನನ್ನು ವಾರ್ಡ್ ನಲ್ಲಿ ಬಿಟ್ಟು ಹೋಗಿದ್ದಾರೆ. ವಾಪಸ್ ಬಂದು ನೋಡಿದರೆ ಮಗು ಇಲ್ಲ. ಇದೆಲ್ಲ ನಡೆದಿದ್ದು ಶನಿವಾರದಂದು. ಎಷ್ಟು ಹುಡುಕಿದರೂ ಮಗು ಸಿಕ್ಕಿಲ್ಲ. ಹೀಗಾಗಿ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಆಟೋ ಹತ್ತಿ ಹೋಗಿರುವುದು ತಿಳಿದಿದೆ. ಆಟೋ ಪತ್ತೆ ಹಚ್ಚಿ ವಿಚಾರಿಸಿದಾಗ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ಹೇಳಿದ್ದಾರೆ. ಆತನ ಮಾಹಿತಿ ಕಲೆ ಹಾಕಿದಾಗ ದೇವರ ಹಿಪ್ಪರಗಿ ತಾಲೂಕಿನವನೆಂದು ತಿಳಿದಿದೆ. ಅವನನ್ನು ಹುಡುಕಾಟ ನಡೆಸುತ್ತಿರುವಾಗಲೇ ಭಾನುವಾರ ಆತನೆ ಆಸ್ಪತ್ರೆಗೆ ಬಂದಿದ್ದಾನೆ.
ತನ್ನ ಮಗು ನೆನಪಾಗಿ ತೆಗೆದುಕೊಂಡು ಹೋದನೆಂದ:
ಭಾನುವಾರ ಆಸ್ಪತ್ರೆಗೆ ಬಂದಾಗ ಆತನ ಬಗ್ಗೆ ಆಟೋ ಚಾಲಕರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ವಶಕ್ಕೆ ಪಡೆದು ವಿಚಾರಿಸಿದಾಗ, ಮಗು ಅಳುತ್ತಿತ್ತು. ಆಗ ನನ್ನ ತೀರಿಹೋದ ಒಂದು ವರ್ಷದ ಮಗು ನೆನಪಾಗಿದೆ. ಹೀಗಾಗಿ ಕರೆದುಕೊಂಡು ಕಲಬುರಗಿಗೆ ಹೋದೆ. ಅಲ್ಲಿ ಒಂದು ದಿನ ಇದ್ದು ವಾಪಸ್ ಬಂದಿರುವುದಾಗಿ ಆತ ಹೇಳಿದ್ದಾನಂತೆ. ಮನೆಯಲ್ಲಿ ಜಗಳವಾಡಿಕೊಂಡು ಬಂದು ಚಿಕಿತ್ಸೆಗೂ ದಾಖಲಾಗದೆ ಜಿಲ್ಲಾಸ್ಪತ್ರೆಯಲ್ಲಿ 2 ದಿನಗಳಿಂದ ಉಳಿದುಕೊಂಡಿದ್ದನಂತೆ. ಈಗ ಆತನ ವಿರುದ್ಧ ಕೇಸ್ ಆಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತ ಯಾವುದೇ ಅಪರಾಧಿ ಹಿನ್ನಲೆ ಹೊಂದಿಲ್ಲ ಎಂದು ತಿಳಿದು ಬಂದಿದೆ.