ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಗಣಿಹಾರ ಗ್ರಾಮದಲ್ಲಿ ಮಹಿಳೆಯೊಬ್ಬರ ಭೀಕರ ಹತ್ಯೆಯಾಗಿದೆ. ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದ್ದು, ನೀಲಮ್ಮ ಪರಮಾನಂದ ಆನಗೊಂಡ(46) ಅನ್ನೋ ಮಹಿಳೆಯ ಕೊಲೆಯಾಗಿದೆ. ದೇಹವನ್ನು ಎರಡು ಭಾಗ ಮಾಡಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬಂದು ಹುಡುಕಾಟ ನಡೆಸಿದಾಗ ಅರ್ಧದೇಹ ಬಾವಿಯಲ್ಲಿ ಪತ್ತೆಯಾಗಿದೆ. ಉಳಿದ ಅರ್ಧ ದೇಹದ ಭಾಗ ಪತ್ತೆಯಾಗಿಲ್ಲ. ಅದು ಕೂಡ ಬಾವಿಯಲ್ಲಿರುವ ಬಗ್ಗೆ ಕೊಲೆಯಾದ ಮಹಿಳೆಯ ಕುಟುಂಬಸ್ಥರು ಶಂಕಿಸಿದ್ದಾರೆ.
ಘಟನೆ ಹಿನ್ನಲೆ: ಸೋಮವಾರ ಸಂಜೆ ಸುಮಾರು 5 ಗಂಟೆಯ ಸಂದರ್ಭದಲ್ಲಿ ಕೊಲೆಯಾದ ನೀಲಮ್ಮ ಹಾಗೂ ಗಂಡ ಪರಮಾನಂದ ನಡುವೆ ಜಗಳವಾಗಿದೆ. ಆಗ ಪತಿ, ಪತ್ನಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನಂತೆ. ಮಕ್ಕಳು ಜಗಳ ಬಿಡಿಸಿದ್ದಾರೆ. ಆದರೆ, ಮಧ್ಯರಾತ್ರಿ ಮಗಳು ಮೂತ್ರವಿಸರ್ಜನೆಗೆ ಎದ್ದಾಗ ತಂದೆ, ತಾಯಿ ಇಬ್ಬರು ಇಲ್ಲದಿರುವುದು ಕಂಡು ಬಂದಿದೆ. ಮೆಕ್ಕೆಜೋಳದ ಹೊಲಕ್ಕೆ ಹಂದಿಗಳು ನುಗ್ಗುವುದರಿಂದ ಅವುಗಳನ್ನು ಓಡಿಸಲು ಪಟಾಕಿ ಹಚ್ಚಲು ಹೋಗಿರಬಹುದೆಂದು ತಿಳಿದುಕೊಂಡಿದ್ದಾರೆ. ಆದರೆ, ಮುಂಜಾನೆ ಸುಮಾರು 6 ಗಂಟೆಗೆ ಎದ್ದಾಗಲೂ ತಂದೆ, ತಾಯಿ ಕಾಣಿಸದಿದ್ದಾಗ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಆಗ ಹೊಲದ ಬದು ಸೇರಿ ಅಲ್ಲಲ್ಲಿ ರಕ್ತದ ಕಲೆ ಬಿದ್ದಿರುವುದು ಕಂಡು ಬಂದಿದೆ.
ಆಗ ಸಂಬಂಧಿಕರಿಗೆ, ಅಕ್ಕಪಕ್ಕದ ಹೊಲದವರಿಗೆ, ಪೊಲೀಸರಿಗೆ ಹೇಳಿದ್ದಾರೆ. ಈ ವೇಳೆ ಎಲ್ಲರೂ ಹುಡುಕುತ್ತಾ ಹೋದಾಗ ಪಕ್ಕದ ಮಹಿಬೂಬುಪಟೇಲ ಎಂಬುವರ ಹೊಲದ ಬಾವಿಯ ಹತ್ತಿರ ಸೈಜು ಕಲ್ಲು ಕಿತ್ತಿರುವುದು ಕಂಡು ಬಂದಿದೆ. ಅಗ್ನಿಶಾಮಕ ದಳದವರು ಹುಕ್ಕು ಹಾಕಿ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ದೇಹದ ಅರ್ಧಭಾಗ ಸಿಕ್ಕಿದೆ. ಇನ್ನರ್ಧ ಭಾಗ ಕಂಡು ಬಂದಿಲ್ಲ. ನಮ್ಮ ತಂದೆ ತಾಯಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಮಗ ಷಣ್ಮುಖಪ್ಪ ದೂರು ದಾಖಲಿಸಿದ್ದಾನೆ. ಆರೋಪಿ ಪತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.